ಮನರಂಜನೆಸಿನಿಮಾ

ಸಿನಿಮಾ ಎಂದರೇನು?-ಭಾಗ 2

ಜಗತ್ತಿನ ಎಲ್ಲೆಡೆಯೂ ಅಂದಿನ ನಿರ್ದೇಶಕರು ನಿರ್ದೇಶಿಸಿರುವ ಹಲವಾರು ಚಿತ್ರಗಳು ಇಂದಿಗೂ ಸಹ ಅತ್ಯಂತ ಜನಮನ್ನಣೆಯ ಚಿತ್ರಗಳಾಗಿವೆಯೆಂದರೆ ನನ್ನ ಮಾತಿನ ಸತ್ಯ ನಿಮಗೆ ತಿಳಿದೀತು.

ಅಂದಿನ ಚಾರ್ಲಿ ಚಾಪ್ಲಿನ್, ಲಾರಲ್ ಅಂಡ್ ಹಾರ್ಡಿ ಇಂದಿಗೂ ಮನೆಮಾತು. ಮೆಕೆನ್ನಾಸ್ ಗೋಲ್ಡ್ ಇಂದಿಗೂ ಚಿತ್ರರಸಿಕರ ಫೆವರೆಟ್ ಸಿನಿಮಾ! ಗುರುದತ್​ರ ಕಾಗಜ್ ಕೆ ಫೂಲ್, ಪ್ಯಾಸಾ ಚಿತ್ರಗಳು ಇಂದಿಗೂ ನವನವೀನ. ನಲವತ್ತು ವರ್ಷಗಳಷ್ಟು ಹಿಂದಿನ ಶೋಲೆ ಚಿತ್ರವನ್ನು ನೋಡದವರುಂಟೆ. ಸತ್ಯಜಿತ್​ರಾಯ್, ದಾದಾಸಾಹೇಬ್ ಫಾಲ್ಕೆ, ಗುರುದತ್, ಶೋಮನ್ ಸುಭಾಷ್ ಘಾಯ್ ಮುಂತಾದ ಹಿಂದಿಯ ದಿಗ್ಗಜ ನಿರ್ದೇಶಕರನ್ನು ಮರೆಯಲಾದೀತೆ? ಕನ್ನಡಕ್ಕೆ ಬಂದರೆ ಕನ್ನಡದ ಮೇರು ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್​​ರವರು ನಿರ್ದೇಶಿಸಿರುವ ಶರಪಂಜರ, ನಾಗರಹಾವು ಎಂದಾದರೂ ಮರೆಯಲಾದೀತೆ?

ಕನ್ನಡದ ಮತ್ತೊಂದು ನ ಭೂತೋ ಚಿತ್ರ ಬಂಗಾರದ ಮನುಷ್ಯ ತೆಗೆದ ಸಿದ್ದಲಿಂಗಯ್ಯನವರು, ಗಂಧದ ಗುಡಿ ನಿರ್ದೇಶಿಸಿದ ವಿಜಯ್, ಸತ್ಯ ಹರಿಶ್ಚಂದ್ರ ನಿರ್ದೇಶಿಸಿದ ಹುಣಸೂರು ಕೃಷ್ಣಮೂರ್ತಿ, ಕವಿರತ್ನ ಕಾಳಿದಾಸ ನಿರ್ದೇಶಿಸಿದ ರೇಣುಕಾಶರ್ಮ, ಕಸ್ತೂರಿ ನಿವಾಸ ನಿರ್ದೇಶಿಸಿದ ದೊರೈಭಗವಾನ್, 1954ರಷ್ಟು ಹಿಂದೆಯೇ ಬೇಡರ ಕಣ್ಣಪ್ಪನಂಥ ಅಧ್ಬುತ ಹಿಟ್ ಚಿತ್ರ ನೀಡಿದ ಹೆಚ್.ಎಲ್.ಎನ್.ಸಿಂಹ ಮುಂತಾದವರೆಲ್ಲ ಸಾಮಾನ್ಯರೆ? ಪ್ರಪ್ರಥಮ ಬಾರಿಗೆ ವಿದೇಶದಲ್ಲ ಚಿತ್ರೀಕರಣ ನಡೆಸಿ ಕನ್ನಡ ಪ್ರೇಕ್ಷಕರಿಗೆ ರೋಮಾಂಚನ ನೀಡಿದ ಕನ್ನಡದ ಏಕೈಕ ಪ್ರೀತಿಯ ಕುಳ್ಳ ಎಂಬ ಬಿರುದಾಂಕಿತ ದ್ವಾರಕೀಶ್​ರವರು ನಿರ್ಮಿಸಿ ನಿರ್ದೇಶಿಸಿದ ಆಫ್ರಿಕಾದಲ್ಲಿ ಶೀಲ, ಸಿಂಗಾಪುರದಲ್ಲಿ ರಾಜಾಕುಳ್ಳ ಮುಂತಾದ ಸಿನಿಮಾಗಳನ್ನು ಮರೆಯಲಾದೀತೆ?

ಕನ್ನಡದಲ್ಲಿ ಹೊಸ ಅಲೆ ಸಿನಿಮಾಗಳನ್ನು ಕೊಟ್ಟ ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ಕಾಸರವಳ್ಳಿ, ಬರಗೂರು ಮುಂತಾದ ವಿಭಿನ್ನ ನಿರ್ದೇಶಕರ ಕನ್ಯೇಶ್ವರ ರಾಮ, ಸಂಸ್ಕಾರ, ಘಟಶ್ರಾದ್ಧಗಳಂಥ ಅದ್ಭುತ ಚಿತ್ರಗಳನ್ನು ಮರೆಯಲಾದೀತೆ? ಕನ್ನಡದ ಪಾಲಿಗೆ ಪ್ರಪ್ರಥಮವಾಗಿ ಬ್ರಿಡ್ಜ್ ಸಿನಿಮಾಗಳನ್ನು ನಿರ್ಮಿಸಿ ನಿರ್ದೇಶಿಸಿದ ಪ್ರತಿಭಾವಂತ ನಿರ್ದೇಶಕ ಶಂಕರ್​ನಾಗ್ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿರಲು ಅವರು ಅಂದು ನಿರ್ದೇಶಿಸಿದ ಅತ್ಯದ್ಭುತ ಚಿತ್ರಗಳಾದ ಮಿಂಚಿನ ಓಟ, ಆಕ್ಸಿಡೆಂಟ್, ಮಾಲ್ಗುಡಿ ಡೇಸ್ ಮುಂತಾದ ಹತ್ತು ಹಲವು ಚಿತ್ರಗಳು ಕಾರಣ ತಾನೆ?

ಹೀಗೆ ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕರ ಬಗ್ಗೆ ಹೇಳುತ್ತ ಹೋದರೆ ಅದಕ್ಕೆ ಕೊನೆಯೇ ಇಲ್ಲ! ಭಾರತದ ಎಲ್ಲ ರಾಜ್ಯಗಳ ಎಲ್ಲ ಭಾಷೆಗಳಲ್ಲಿ ಬಂದು ಹೋದಷ್ಟು ಪ್ರತಿಭಾವಂತ ನಿರ್ದೇಶಕರು ಬಹುಶಃ ಪ್ರಪಂಚದ ಬೇರಾವುದೇ ದೇಶದಲ್ಲಿ ಕಾಣಸಿಗಲಿಕ್ಕಿಲ್ಲವೇನೊ!

ಮುಂದುವರೆಯುವುದು…

ಓಂಪ್ರಕಾಶ್ ನಾಯಕ್, BMG24x7ಲೈವ್​ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button