ಸಿಂಹಕ್ಕೆ ಬಂದ ಮದುವೆ ಆಸೆ

ಒಂದು ಕಾಡಿನಲ್ಲಿ ಒಂದು ಸಿಂಹ ವಾಸವಾಗಿತ್ತು. ಅದು ಅತ್ಯಂತ ಬಲಿಷ್ಠ ಸಿಂಹವಾಗಿದ್ದು ಸುಂದರವಾಗಿಯೂ ಇತ್ತು. ಆ ಕಾಡಿಗೆ ಒಬ್ಬ ಮರ ಕಡಿಯುವವನು ಪ್ರತಿ ದಿನ ಬಂದು ಮರವನ್ನು ಕಡಿದು ಕೊಂಡು ಹೋಗಿ ಕಟ್ಟಿಗೆಯನ್ನು ಮಾರಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದ. ಹಾಗೆ ಅವನು ಕಾಡಿಗೆ ಬರುವಾಗ ಜೊತೆಯಲ್ಲಿ ತನ್ನ ಮಗಳನ್ನು ಕರೆದುಕೊಂಡು ಬರುತ್ತಿದ್ದ.
ಅವಳ ಹೆಸರು ಅಪೂರ್ವ. ಅವಳು ನೋಡಲು ರೂಪವತಿಯಾಗಿದ್ದಳು, ಅವಳನ್ನು ನೋಡಿದ ಸಿಂಹಕ್ಕೆ ಏನಾದರು ಮಾಡಿ ಅವಳನ್ನು ಮದುವೆಯಾಗಬೇಕೆನಿಸಿತು. ಮಾರನೆಯ ದಿನ ಸಿಂಹ ಮರ ಕಡಿಯುವವನ ಬಳಿ ಬಂದು ’ಅಯ್ಯಾ ! ನಾನು ನಿನ್ನ ಮಗಳನ್ನು ನೋಡಿದ್ದೇನೆ. ಅವಳು ನನಗೆ ತುಂಬಾ ಇಷ್ಟವಾಗಿದ್ದಾಳೆ.
ನಾನು ಅವಳನ್ನು ಮದುವೆ ಯಾಗಬೇಕೆಂದು ಕೊಂಡಿದ್ದೇನೆ , ಏನು? ಹೇಳುವಿರಿ ನೀವು?’ ಎಂದು ಕೇಳಿತು. ಮರ ಕಡಿಯುವವನಿಗೆ ಭಯ ಶುರುವಾಯಿತು. ಸಿಂಹಕ್ಕೆ ಮಗಳನ್ನು ಮದುವೆ ಮಾಡಿಕೊಡುವುದು ಹೇಗೆ? ಇಲ್ಲವೆಂದಲ್ಲಿ ಸಿಂಹ ತನ್ನನ್ನು ಬಿಡುವುದೇ ಎಂದು ಚಿಂತಿಸುತ್ತಿದ್ದ. ಕೊನೆಗೆ ಅವನು ಸಿಂಹವನ್ನು ಕುರಿತು ಹೇಳಿದ.
ಸಿಂಹ ರಾಜ, ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಬೇಕು ಎಂದು ನನಗೆ ಆಸೆ ಇದೆ ಆದರೆ ಏನು ಮಾಡಲಿ, ನನ್ನ ಮಗಳಿಗೆ ನಿನ್ನ ಕೋರೆ ಹಲ್ಲು ಹಾಗೂ ಚೂಪಾದ ಉಗುರುಗಳನ್ನು ಕಂಡರೆ ವಿಪರೀತ ಹೆದರಿಕೆ. ಹೀಗಿರುವಾಗ ಅವಳನ್ನು ನಿನಗೆ ಹೇಗೆ ಕೊಟ್ಟು ಮದುವೆ ಮಾಡುವುದು? ಒಂದು ಕೆಲಸ ಮಾಡು.
ನೀನು ನಿನ್ನ ಹಲ್ಲುಗಳನ್ನು ಕೀಳಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು ಬಾ. ಆಗ ನನ್ನ ಮಗಳನ್ನು ಮದುವೆ ಮಾಡಿಕೊಡುವೆ ಎಂದನು. ಅವನ ಮಾತನ್ನು ನಂಬಿ ಸಿಂಹ ಅವನು ಹೇಳಿದಾಗೆ ಹಲ್ಲುಗಳನ್ನು ಕೀಳಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು ಬಂದಿತು. ಆಗ ಆ ಸಿಂಹಕ್ಕೆ ಒಂದು ದೊಡ್ಡ ದೊಣ್ಣೆ ತಂದು ಚೆನ್ನಾಗಿ ಹೊಡೆದು ಓಡಿಸಿದ. ಒಳ್ಳೆಯ ಉಪಾಯ ಮಾಡಿ ಕೊನೆ ತನ್ನ ಹಾಗೂ ತನ್ನ ಮಗಳಿಗೂ ಬಂದ ಗಂಡಾಂತರದಿಂದ ಪಾರಾದ.
ನೀತಿ: ಉಪಾಯ ಬಲ್ಲವನಿಗೆ ಅಪಾಯವಿಲ್ಲ




