35 ವರ್ಷದಿಂದ ಹಿಂದೂ ದೇವರ ವಿಗ್ರಹಗಳ ಕೆತ್ತನೆಯಲ್ಲಿ ಮುಸ್ಲಿಂ ಶಿಲ್ಪಿ!

ಕೋಲಾರ: ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂರ ವ್ಯಾಪಾರ ಮಳಿಗೆ ನಿಷೇಧ, ಹಲಾಲ್ ಕಟ್ ವಿವಾದಗಳು ರಾಜ್ಯದ ಭಾವೈಕ್ಯತೆಯನ್ನು ಕದಡುತ್ತಿದ್ದು ಚರ್ಚೆಗೆ ಗ್ರಾಸವಾಗಿವೆ. ಆದರೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಶಿಲ್ಪಿಯೊಬ್ಬರು ಕಳೆದ ೩ ದಶಕಗಳಿಂದ ಸದ್ದು ಗದ್ದಲವಿಲ್ಲದೆ ದೇವರ ಮೂರ್ತಿಗಳ ಕೆತ್ತನೆಯಲ್ಲಿ ನಿರತರಾಗಿದ್ದಾರೆ.
ಶಿವಾರಿಪಟ್ಟಣ ರಾಜ್ಯ ಮತ್ತು ದೇಶದಲ್ಲಿ ಶಿಲ್ಪಕಲೆಗೆ ಖ್ಯಾತಿಯಾಗಿದೆ. ನೂರಾರು ವರ್ಷಗಳಿಂದ ಈ ಗ್ರಾಮದಲ್ಲಿ ವಿಶ್ವ ಕರ್ಮ ಸಮುದಾಯದವರು ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಗ್ರಾಮದ ಹೆಗ್ಗಳಿಕೆ ಎಂದರೆ ಇಲ್ಲಿ ಕಲ್ಲಿಗೆ ದೇವರ ರೂಪ ನೀಡಲಾಗುತ್ತದೆ. ರಾಜ್ಯ ಮತ್ತು ದೇಶದ ಹಲವಾರು ದೇವಾಲಯಗಳಿಗೆ ಇಲ್ಲಿ ಕೆತ್ತಿದ ಮೂರ್ತಿಗಳನ್ನು ಕಳುಹಿಸಲಾಗುವುದು. ವಿಶ್ವ ಕರ್ಮ ಸಮುದಾಯಕ್ಕೆ ವಿಗ್ರಹ ಮತ್ತು ಮೂರ್ತಿಗಳ ಕೆತ್ತನೆ ಸಾಂಪ್ರದಾಯಿಕ ಮೂಲ ಕಸುಬಾಗಿದೆ.
ಇದೇ ಶಿವಾರಪಟ್ಟಣದಲ್ಲಿ ೫೦ ವರ್ಷದ ಮುನಾವರ್ ಬಾಬು ಅನಕ್ಷರಸ್ಥನಾಗಿದ್ದು ಒಂದು ಕಾಲದಲ್ಲಿ ದನ ಕಾಯುತ್ತಿದ್ದ. ಮುನಾವರ್ ತಂದೆ ಪೀರ್ ಸಾಬ್ ವಿಗ್ರಹಗಳ ಕೆತ್ತನೆ ಕೆಲಸ ಮಾಡುತ್ತಿದ್ದ. ಆತ ಶಿವಾರಿಪಟ್ಟಣದ ಶಿಲ್ಪಿ ಒಬ್ಬರ ಬಳಿ ಕೆತ್ತನೆ ಕೆಲಸ ಮಾಡುತ್ತಿದ್ದ. ತಂದೆ ಮಾಡುತ್ತಿದ್ದ ಕೆಲಸವನ್ನು ಗಮನಿಸುತ್ತಿದ್ದ ಮುನಾವರ್ ತಾನು ಕೆತ್ತನೆಯ ಕೆಲಸ ಮಾಡಬೇಕೆಂದು ಆಲೋಚಿಸಿದ್ದ.
ದೇವರ ಕಲ್ಲಿನ ಮೂರ್ತಿಗಳು ಅಲ್ಲದೆ ಹಿತ್ತಾಳೆಯ ವಿಗ್ರಹಗಳನ್ನು ಮಾಡುತ್ತಾನೆ. ದೇವಾಲಯಗಳಿಗೆ ಅಗತ್ಯವಿರುವ ಧ್ವಜ ಸ್ತಂಭಗಳು ಹಾಗು ದೇವಸ್ಥಾನಕ್ಕೆ ಅಗತ್ಯವಿರುವ ಮೂರ್ತಿಗಳ ಕೆತ್ತನೆ ಮಾಡುತ್ತಾನೆ. ಜೊತೆಗೆ ಕಲ್ಲಿನಲ್ಲಿಯೇ ದೇವಾಲಯಗಳನ್ನು ನಿರ್ಮಾಣ ಮಾಡುವ ಕಾಯಕದಲ್ಲಿ ತೊಡಗಿದ್ದಾನೆ. ದೇವರ ಮೂರ್ತಿಗಳಲ್ಲದೆ ಡಾ.ಬಿ ಆರ್ ಅಂಬೇಡ್ಕರ್ ಸೇರಿದಂತೆ ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಕೆತ್ತನೆ ಮಾಡುತ್ತಾರೆ. ಆತನ ಸಹಾಯಕರಾಗಿ ಐದಾರು ಮಂದಿ ಮುಸ್ಲಿಂ ಯುವಕರು ಕೆಲಸ ಮಾಡುತ್ತಿದ್ದಾರೆ.
