ಸಿದ್ದರಾಮಯ್ಯನವರಿಗೆ ಸಚಿವ ಭೈರತಿ ಬಸವರಾಜ್ ಗುದ್ದು…!

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಮಾಜಿ ಸಿಎಂ ಆಗಿದ್ದವರು ಅರಿತು ಹೇಳಿಕೆ ಕೊಡಬೇಕಿತ್ತು. ಸ್ವಾಮೀಜಿಗಳು ಧಾರ್ಮಿಕ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅಂತವರ ಮನಸ್ಸಿಗೆ ನೋವುಂಟು ಮಾಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂದಿದ್ದಾರೆ.
ಎಲ್ಲಾ ಸ್ವಾಮೀಜಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆ ಕೊಡುವುದು ಸರಿಯಲ್ಲ. ಯಾರೇ ಆಗಲಿ ಶಾಂತಿ ಕದಡುವ ಕೆಲಸ ಮಾಡಬಾರದು. ಸ್ವಾಮೀಜಿಗಳು ಕೇಸರಿ ವಸ್ತ್ರ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಅನ್ಯ ಧರ್ಮೀಯರಿಂದ ವ್ಯಾಪಾರ ಸಂಬಂಧ ಈ ಕಾಯ್ದೆ ಮಾಡಿದ್ದು ನಾವಲ್ಲ.ಕಾಂಗ್ರೆಸ್ ಅವಧಿಯಲ್ಲೇ ಈ ಕಾಯ್ದೆ ಮಾಡಲಾಗಿದೆ. ಅಂಗೀಕಾರ ಪಡೆದು ಕಾನೂನು ತಿದ್ದುಪಡಿ ಮಾಡಿದ್ದಾರೆ. ಪಾಲನೆ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ ಅಷ್ಟೇ. ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಒಂದು ವರ್ಷ ಚುನಾವಣೆ ಬಾಕಿ ಇದೆ.
ಯಾವಾಗ ಚುನಾವಣೆ ಬಂದರೂ ಎದುರಿಸಲು ನಾವು ರೆಡಿ ಇದ್ದೇವೆ. ಡಿಸೆಂಬರ್ ನಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾವನೆ ಇಲ್ಲ. ಅವಧಿ ಮುಗಿದ ಬಳಿಕವೇ ಚುನಾವಣೆ ಎಂದು ತಿಳಿಸಿದರು. ಸಂಪುಟ ವಿಸ್ತರಣೆ ಮಾಹಿತಿ ಇಲ್ಲ. ವಿಸ್ತರಣೆ ಸಿಎಂಗೆ ಬಿಟ್ಟಿದ್ದು. ಮುಂದಿನ ತಿಂಗಳು ಪ್ರಧಾನಿ, ಗೃಹ ಸಚಿವರು ಬೆಂಗಳೂರಿಗೆ ಬರುತ್ತಿದ್ದಾರೆ. ಆಗ ಸಂಪುಟ ವಿಸ್ತರಣೆ ಚರ್ಚೆ ಆಗಬಹುದು ಎಂದರು.
ಸಚಿವ ಸೋಮಣ್ಣ ಮೆಸೇಜ್ ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಕ್ಕಾಗಿ ವಿವಾದ ಮಾಡುವುದು ಸರಿಯಲ್ಲ, ಸಚಿವರ ಕೈಗೆ ಸಿಎಂ ಸಿಗುತ್ತಿಲ್ಲ ಎನ್ನುವುದು ಸುಳ್ಳು. ಎಲ್ಲಾ ಕಾರ್ಯಕ್ರಮ ಮುಗಿಸಿ, ಬಳಿಕ ಮತ್ತೆ ಸದನಕ್ಕೆ ಬಂದು ಸಿಎಂ ಉತ್ತರ ಕೊಡುತ್ತಿದ್ದಾರೆ. ಸಿಎಂ ಸತತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಪರ ಭೈರತಿ ಬ್ಯಾಟ್ ಬೀಸಿದರು.
