ತಾಂತ್ರಿಕ ದೋಷ, RRR ಪ್ರದರ್ಶನ ರದ್ದು: ಆಕ್ರೋಶಕ್ಕೆ ಎಲ್ಲಾ ಪೀಸ್ ಪೀಸ್..!

ದಾವಣಗೆರೆ: ಬಾಹುಬಲಿ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಆರ್ ಆರ್ ಆರ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಜಗಳೂರಿನಲ್ಲಿ ಸಿನಿಮಾ ಪ್ರದರ್ಶನ ರದ್ದುಗೊಳಿಸಿದ್ದರಿಂದ ಪ್ರೇಕ್ಷಕರು ರೊಚ್ಚಿಗೆದ್ದ ಘಟನೆ ನಡೆದಿದೆ. ಸಿನಿಮಾ ಥಿಯೇಟರ್ ನ ಗ್ಲಾಸ್ ಪೀಸ್ ಪೀಸ್ ಆಗಿವೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರ್ ಆರ್. ಆರ್ ಸಿನಿಮಾದ ಹವಾ ಸೃಷ್ಟಿಯಾಗಿದೆ. ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಅಭಿಮಾನಿಗಳು ಎಲ್ಲೆಡೆ ದೊಡ್ಡ ದೊಡ್ಡ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಸೇರಿದಂತೆ ಥಿಯೇಟರ್ ಗಳ ಮುಂದೆ ಕುಣಿದು ಕುಪ್ಪಳಿಸುತ್ತಿದ್ದಾರೆ.
ಆದರೆ ದಾವಣಗೆರೆ ಜಿಲ್ಲೆ ಜಗಳೂರಿನ ಭಾರತ್ ಚಿತ್ರಮಂದಿರದಲ್ಲಿ ಬೆಳಿಗ್ಗೆಯಿಂದ ಎರಡು ಶೋ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ಮೂರನೇ ಶೋ ಪ್ರದರ್ಶನದ ವೇಳೆ ತಾಂತ್ರಿಕ ಸಮಸ್ಯೆಯಿಂದ ವಿಡಿಯೋ ಕಟ್ ಕಟ್ ಆಗುವುದಲ್ಲದೇ ಸೌಂಡ್ ಎಫೆಕ್ಟ್ ಬಾರದಿರುವುದಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದರು.
ಚಿತ್ರಮಂದಿರದವರ ವಿರುದ್ಧ ಕೋಪಗೊಂಡು ಪಿಓಪಿ ಶೀಟ್ ಹಾಗೂ ಕೆಲವು ವಸ್ತುಗಳನ್ನು ಮುರಿದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಚಿತ್ರಮಂದಿರದವರು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ ಶೋ ರದ್ದುಮಾಡಿ ಟಿಕೆಟ್ ದರವನ್ನು ವಾಪಸ್ ನೀಡಿ ಕಳುಹಿಸಿದ್ದಾರೆ. ಆದರೆ ತಾಲೂಕಿನ ವಿವಿಧೆಡೆಗಳಿಂದ ಸಿನಿರಸಿಕರು ಬಂದಿದ್ದರು. ಸುಮಾರು 20 ರಿಂದ 30 ಕಿಲೋಮೀಟರ್ ಗ್ರಾಮೀಣ ಭಾಗದಿಂದ ಆಗಮಿಸಿದ ಅಭಿಮಾನಿಗಳು ನಿರಾಸೆಯಿಂದ ಮನೆ ಕಡೆ ಮುಖ ಮಾಡಿದರು. ತಾಂತ್ರಿಕ ದೋಷಕ್ಕೆ ಕೆಂಡಮಂಡಲರಾದ ಅಭಿಮಾನಿಗಳು ಚಿತ್ರಮಂದಿರದ ವಿರುದ್ಧ ಘೋಷಣೆ ಕೂಗಿಕೊಂಡೇ ಅಲ್ಲಿಂದ ತೆರಳಿದರು.
