ಕೊಡಗಿನ ಕುಲಗೋವು ಸಮ್ಮೇಳನದಲ್ಲಿ ಮುಸ್ಲಿಂ ವರ್ತಕರ ಅಂಗಡಿ ತೆರವು

ಕೊಡಗು: ಕರಾವಳಿಯಿಂದ ಪ್ರಾರಂಭವಾದ ಮುಸ್ಲಿಂ ವ್ಯಾಪಾರಿಗಳ ನಿಷೇಧ ಅಭಿಯಾನ ಇಡೀ ರಾಜ್ಯಕ್ಕೆ ಹಬ್ಬಿದೆ. ಇದೀಗ ಕೊಡಗು ಜಿಲ್ಲೆಗೂ ವಿಸ್ತರಿಸಿದೆ. ಹಿಂದೂ-ಮುಸ್ಲಿಂ ಎಂಬ ಜಿದ್ದಾ ಜಿದ್ದಿ ಮತ್ತಷ್ಟು ಮುಂದುವರೆಯುವ ಸಾಧ್ಯತೆ ದಟ್ಟವಾಗತೊಡಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ತಪೋವನ ಕ್ಷೇತ್ರದ ಮನೇಹಳ್ಳಿ ಮಠದ ಬಿಲ್ವ ಗೋಶಾಲೆಯ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕುಲಗೋವು ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ನಡೆಸಲು ಬಜರಂಗದಳದ ಕಾರ್ಯಕರ್ತರು ಅವಕಾಶ ನೀಡಲಿಲ್ಲ.
ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಇದ್ದ ಬಜರಂಗದಳದ ಯುವಕರು ಮುಸ್ಲಿಂ ಸಮುದಾಯದವರು ವ್ಯಾಪಾರಕ್ಕೆ ಹಾಕಿದ ಅಂಗಡಿ ಖಾಲಿ ಮಾಡಿಸಿದ್ದಾರೆ.
ಮಕ್ಕಳ ಆಟಿಕೆ ವಸ್ತು, ಕಬ್ಬಿನ ಜ್ಯೂಸ್, ತಿಂಡಿ ತಿನಿಸುಗಳ ಮಳಿಗೆಯನ್ನು ಮುಸ್ಲಿಂ ಸಮುದಾಯದ ವರ್ತಕರು ಹಾಕಿದ್ದರು. ಗೋವು ಹತ್ಯೆ ಮಾಡುವವರು, ಗೋವು ಸಮ್ಮೇಳನಕ್ಕೆ ಏಕೆ ಬರಬೇಕು ಅವರಿಗೆ ಅವಕಾಶ ನೀಡುವುದಿಲ್ಲ’ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಹಿಂದೂಗಳು ನಡೆಸುವ ಜಾತ್ರೆಯ ವೇಳೆ ವರ್ತಕರಿಗೆ ಅವಕಾಶ ನೀಡುವುದಿಲ್ಲ. ಬೇಕಿದ್ದರೆ ಅವರ ಧಾರ್ಮಿಕ ಸ್ಥಳಗಳ ಬಳಿ ವ್ಯಾಪಾರ ಮಾಡಿಕೊಳ್ಳಲಿ’ ಎಂದು ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಜೀವನ್ ಆಗ್ರಹಿಸಿದರು.ಬಜರಂಗದಳ ಪ್ರಖಂಡರಾದ ಜೀವನ್ ನೇಗಳ್ಳೆ, ಮಧು ಕಿಬ್ಬೆಟ್ಟ, ಪ್ರದೀಪ್, ಪಿ.ಕೆ.ರವಿ, ತನ್ಮಯ್, ಸತ್ಯ, ವಿಶ್ವ, ನಿಶ್ಚಿತ್, ಯಶು, ಮಂಜೇಶ, ದರ್ಶನ್ ಹಾಜರಿದ್ದರು.
