ಮುಸ್ಲಿಮರನ್ನು ಕಾಲಾಳುಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ: ಅಸಾದುದ್ದೀನ್ ಓವೈಸಿ

ನವದೆಹಲಿ: ಮುಸ್ಲಿಮರನ್ನು ಕಾಲಾಳುಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭೂಮ್ ನಲ್ಲಿ ಎಂಟು ಜನರ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಓವೈಸಿ, ಬಿರ್ಭೂಮ್ ನಲ್ಲಿ ಏನೇ ನಡೆದರೂ ಸರ್ಕಾರ ಮುಸ್ಲಿಮರನ್ನು ತಮ್ಮ ಕಾಲಾಳುಗಳಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ. ಒಂದೇ ರಾಜಕೀಯ ಪಕ್ಷದ ಎರಡು ಗುಂಪುಗಳು ಹಿಂಸಾಚಾರವನ್ನು ಸೃಷ್ಟಿಸುತ್ತಿವೆ ಎಂದು ಆಕ್ರೋಶ ಹೊರ ಹಾಕಿದರು.
ರಾಮ್ಪುರಹಾಟ್ನಲ್ಲಿ ಮಕ್ಕಳು ಸೇರಿದಂತೆ ಹಲವಾರು ಜನರು ಕೊಲ್ಲಲ್ಪಟ್ಟಿರುವುದು ಖಂಡನೀಯ. ಬಂಗಾಳದಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಸಾದುದ್ದೀನ್ ಓವೈಸಿ ದೂರಿದರು.
ಪಶ್ಚಿಮ ಬಂಗಳಾದ ಬಿರ್ಭೂಮ್ ಜಿಲ್ಲೆಯ ರಾಮ್ ಪುರಹಾಟ್ ನಲ್ಲಿ ಮಂಗಳವಾರ ಬೆಳಗಿನ ಜಾವ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ 8 ಜನರನ್ನ ಜೀವಂತವಾಗಿ ಸುಟ್ಟು ಹಾಕಲಾಗಿದ್ದು ಘಟನೆ ಸಂಬಂಧ ಈಗಾಗ್ಲೆ 11 ಮಂದಿಯನ್ನ ಬಂಧಿಸಲಾಗಿದೆ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೃತ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದು ಘಟನೆಗೆ ಕಾರಣ ಎನ್ನಲಾದ ಟಿಎಂಸಿ ನಾಯಕನನ್ನು ಬಂಧಿಸುವಂತೆ ಸೂಚಿಸಿದ್ದಾರೆ.
