ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯಿಂದ ಕ್ಷಮೆ ಯಾಚನೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಅದ್ಭುತವಾಗಿ ಪ್ರದರ್ಶನವಾಗುತ್ತಿದೆ. ಜೇಮ್ಸ್ ಚಿತ್ರದೊಂದಿಗೆ ಅಭಿಮಾನಿಗಳಿಗೆ ಭಾವನಾತ್ಮಕ ಸಂಬಂಧವಿದ್ದು ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಪುನೀತ್ ರಾಜ್ ಕುಮಾರ್ ಹಾಗೂ ಜೇಮ್ಸ್ ಸಿನಿಮಾದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಇದೀಗ ಕ್ಷಮೆ ಯಾಚಿಸಿದ್ದಾನೆ.
ಪುನೀತ್ ಹಾಗೂ ಜೇಮ್ಸ್ ಸಿನಿಮಾದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಿಂದ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಕೊನೆಗೂ ವ್ಯಕ್ತಿಯನ್ನ ಹುಡುಕಿದ ಪುನೀತ್ ಅಭಿಮಾನಿಗಳು ಬುದ್ದಿವಾದ ಹೇಳಿದ್ದಾರೆ. ಬಳಿಕ ತಾನು ಮಾತನಾಡಿದ್ದು ತಪ್ಪಾಯಿತು ಎಂದು ಯುವಕ ಕ್ಷಮೆ ಯಾಚಿಸಿದ್ದಾನೆ. ಅಲ್ಲದೆ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಮಸ್ಕರಿಸಿ ಕ್ಷಮೆ ಕೇಳಿದ್ದಾನೆ.
ಜೇಮ್ಸ್ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಪವನ್ ಎಂಬ ಕಾಲೇಜು ಯುವಕ ಯುಟ್ಯೂಬ್ ಚಾನಲ್ ಒಂದರಲ್ಲಿ ಪುನೀತ್ ಹಾಗೂ ಜೇಮ್ಸ್ ಸಿನಿಮಾದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ.
“ನನ್ನ ಮಾತಿನಿಂದ ತಪ್ಪಾಗಿದ್ದರೆ ನಾನು ಕ್ಷಮೆ ಹೇಳುತ್ತೇನೆ. ನಾನು ಈ ರೀತಿ ಮಾತಾಡಬಾರದಿತ್ತು. ಇನ್ನೊಮ್ಮೆ ಯಾವುದೇ ಹೀರೋ ಬಗ್ಗೆ ಆಗಲಿ ಸಿನಿಮಾ ಬಗ್ಗೆ ಆಗಲಿ ಹೀಗೆ ಮಾತಾಡುವುದಿಲ್ಲ. ಎಲ್ಲಾ ಅಪ್ಪು ಅಭಿಮಾನಿಗಳಿಗೆ ನನ್ನಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ.” ಎಂದು ಪವನ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಮ್ಮುಖದಲ್ಲಿ ಕ್ಷಮೆ ಕೇಳಿದ್ದಾನೆ.
ಪವನ್ ಹುಡುಕಿ ಬುದ್ದಿ ಹೇಳಿರುವ ಅಭಿಮಾನಿಗಳು ಕೂಡ ಪವನ್ ಅನ್ನು ಕ್ಷಮಿಸಿದ್ದಾರೆ. ಇನ್ನೂ ಕಾಲೇಜು ಓದುತ್ತಿರುವ ಹುಡುಗ ಹುಡುಗಾಟದಿಂದ ಏನೋ ಮಾತಾಡಿದ್ದಾನೆ. ಅದಕ್ಕೆ ಕ್ಷಮಿಸಿದ್ದೇವೆ ಎಂದಿದ್ದಾರೆ. “ಇನ್ನೂ ಕಾಲೇಜು ಹುಡುಗ. ಹುಡುಗಾಟಿಕೆ ಬುದ್ದಿಯಿಂದ ಏನೋ ಮಾತಾಡಿದ್ದಾರೆ. ಎಲ್ಲಾ ಅಭಿಮಾನಿಗಳು ಈ ಹುಡುಗ ಪವನ್ ಅನ್ನು ದಯವಿಟ್ಟು ಕ್ಷಮಿಸಬೇಕು. ಟ್ರೋಲ್ ಪೇಜ್‌ನವರು ಈ ಹುಡುಗ ಕ್ಷಮೆಯನ್ನು ಸ್ವೀಕರಿಸಿ, ಆ ವಿಡಿಯೋಗಳನ್ನು ಡಿಲೀಟ್ ಮಾಡಿ.” ಎಂದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
