ಟ್ರಾಫಿಕ್ ಪೋಲಿಸರ ಕಿರಿ ಕಿರಿ: ಸಾರ್ವಜನಿಕರ ಆಕ್ರೋಶ

ದೇವನಹಳ್ಳಿ: ದಿನ ಬೆಳಗಾದರೆ ನಿತ್ಯದ ಅಗತ್ಯಗಳಿಗೆ ದ್ವಿಚಕ್ರ ವಾಹನಗಳಲ್ಲಿ ಟೌನ್ ಒಳ ವ್ಯಾಪ್ತಿಯಲ್ಲಿ ಓಡಾಡುವವರಿಗೆ ನಾಲ್ಕಾರು ಬಾರಿ ದಂಡ ವಿಧಿಸಿ ಟ್ರಾಫಿಕ್ ಪೋಲೀಸರು ವಿಪರೀತ ಕಿರುಕುಳ ಕೊಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಕೇಳಿಕೊಂಡಿದ್ದಾರೆ.
ಟ್ರಾಫಿಕ್ ಪೊಲೀಸರಿಂದ ಆಗುತ್ತಿರುವ ಕಿರಿಕಿರಿಯಿಂದ ಮುಕ್ತಿ ನೀಡಬೇಕು ಎಂದು ಕಳೆದ ಭಾನುವಾಸ ಸಾರ್ವಜನಿಕರು ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಟ್ರಾಫಿಕ್ ಸಮಸ್ಯೆ ಆಲಿಸಲು ಶಾಸಕರು ಮತ್ತು ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು. ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಇಂದು ನಡೆಯಿತು.
ದೇವನಹಳ್ಳಿಯಲ್ಲಿ ಹಾಲು, ತರಕಾರಿ, ಕುಡಿಯುವ ನೀರು, ತರಲು ನಿತ್ಯ ಓಡಾಡುವ ದ್ವಿಚಕ್ರ ವಾಹನ ಸವಾರರ ಮೇಲೆ ಟ್ರಾಫಿಕ್ ಪೋಲೀಸರು ವಿಪರೀತ ತೊಂದರೆ ಕೊಡುತ್ತಿದ್ದಾರೆ. ಇಲ್ಲಿನ ಪ್ರತಿ ದ್ವಿಚಕ್ರ ವಾಹನಗಳ ಮೇಲೆ 8 ರಿಂದ 10 ಸಾವಿರ ದಂಡ ದಾಖಲಾಗಿದೆ. ಪೋಲಿಸರು ಎಲ್ಲೆಂದರಲ್ಲಿ ಮೊಬೈಲ್ ಮೂಲಕ ದ್ವಿಚಕ್ರ ವಾಹನಗಳ ಪೋಟೋ ತೆಗೆದು ದಂಡ ದಾಖಲಾಗುವಂತೆ ಮಾಡಿದ್ದಾರೆ.
ಪೋಲಿಸರಿಗೆ ನಿತ್ಯ ಇಂತಿಷ್ಟು ದಂಡ ವಸೂಲಿ ಮಾಡಬೇಕು ಎಂಬ ಮೇಲಧಿಕಾರಿಗಳ ಒತ್ತಡವು ಇದಕ್ಕೆ ಕಾರಣವಾಗಿದ್ದು ಈ ಕೂಡಲೇ ಇದನ್ನು ನಿಲ್ಲಿಸಿ ಎಂದು ಶಾಸಕರು ಮತ್ತು ಅಧಿಕಾರಿಗಳ ಎದುರೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ಟೌನ್ ನಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬಾರದು. ಈಗಾಗಲೇ ದ್ವಿಚಕ್ರ ವಾಹನಗಳಿಗೆ ವಿಧಿಸಿರು ದಂಡವನ್ನು ರದ್ದು ಮಾಡಬೇಕು. ಬೆಂಗಳೂರು ನಗರ ವ್ಯಾಪ್ತಿಗೆ ಸೇರಿರುವ ಪೋಲಿಸ್ ಠಾಣೆಯನ್ನು ಗ್ರಾಮಾಂತರಕ್ಕೆ ವರ್ಗಾಯಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಈ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಯಾವ ರೀತಿಯಾಗಿ ಈ ಬಗ್ಗೆ ಸಮಸ್ಯೆ ಬಗೆಹರಿಸಬೇಕು ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪೋಲಿಸರು ಸಾರ್ವಜನಿಕರಿಗೆ ಭರವಸೆ ನೀಡಿದರು.
