
ಬಿಬಿಎಂಪಿ ನಿರ್ಲಕ್ಷಕ್ಕೆ ನಿತ್ಯ ಒಬ್ಬರಲ್ಲ ಒಬ್ಬರು ಬಲಿಯಾಗ್ತಿದ್ದಾರೆ. ಇಷ್ಟಾದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ನಿನ್ನೆ ಬಿಬಿಎಂಪಿಯ ಕಸದ ಲಾರಿ ಬಾಲಕಿಯೊಬ್ಬಳನ್ನ ಬಲಿ ಪಡೆದುಕೊಂಡಿರುವ ಘಟನೆ ಹೆಬ್ಬಾಳದ ಬಳಿ ನಡೆದಿದೆ.ಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟರ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ ಬಿಬಿಎಂಪಿ ಬೇಜವಾಬ್ದಾರಿ, ನಿರ್ಲಕ್ಷ್ಯ, ಅವೈಜ್ಞಾನಿಕ ಕಸದ ವಿಲೇವಾರಿ ಹಾಗೂ ಅಸಮರ್ಪಕ ರಸ್ತೆ, ಚರಂಡಿ ನಿರ್ವಹಣೆಯಿಂದ ಜನರ ಜೀವಕ್ಕೆ ಕಿಮ್ಮತ್ತಿಲ್ಲದಾಗಿದೆ. ಹೆಬ್ಬಾಳದ ಮೇಲು ಸೇತುವೆ ಬಳಿ ಕಸದ ಲಾರಿಗೆ ನೂರು ವರ್ಷ ಬಾಳಿ ಬದುಕಬೇಕಿದ್ದ ಬಾಲಕಿ ಬಲಿಯಾಗಿದ್ದಾಳೆ.
ಭಾನುವಾರ ನಗರದಲ್ಲಿ ಸುರಿದ ಮಳೆಯಿಂದ ಫ್ಲೈ ಓವರ್ ಅಂಡರ್ಪಾಸ್ನಲ್ಲಿ ನೀರು ತುಂಬಿತ್ತು. ಹೀಗಾಗಿ ಮಕ್ಕಳು ಅಂಡರ್ ಪಾಸ್ನಲ್ಲಿ ಹೋಗದೆ ರಸ್ತೆ ಮೂಲಕ ದಾಟುತ್ತಿದ್ದರು. ಈ ಸಂದರ್ಭದಲ್ಲಿ ದುರಂತ ಘಟಿಸಿದೆ.
ಸ್ವತಃ ಗೌರವಾನ್ವಿತ ಹೈಕೋರ್ಟ್ ಛೀಮಾರಿ ಹಾಕಿದ್ದರೂ, ಎಂಜಿನಿಯರುಗಳನ್ನು ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದರೂ ಎಮ್ಮೆ ಚರ್ಮದ ಪಾಲಿಕೆ ಪಾಠ ಕಲಿತಿಲ್ಲ. ಬಿಬಿಎಂಪಿ ಆಟಗಳಿಗೆ ಸೀಟಿ ಹೊಡೆಯುತ್ತಾ, ಅಲ್ಲಿನ ಅದಕ್ಷ ಅಧಿಕಾರಿಗಳನ್ನು ಪೊರೆದು ಪೋಷಣೆ ಮಾಡುತ್ತಿರುವ ಸರಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲವಾಗಿದೆ.
ಬೆಂಗಳೂರು ನಗರದ ಗೌರವ, ಪ್ರತಿಷ್ಠೆ ಹಾಳು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಅಲ್ಲಿಂದ ಹೊರಹಾಕಿ ಬಿಬಿಎಂಪಿಯನ್ನು ಮೊದಲು ಸ್ವಚ್ಚಗೊಳಿಸಬೇಕಿದೆ. ಅಲ್ಲಿಂದಲೇ ಬೆಂಗಳೂರಿನ ಸ್ವಚ್ಚತೆ ಆರಂಭವಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಕುಮಾರಸ್ವಾಮಿ ಟ್ವೀಟರ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
