ಗರ್ಭಿಣಿ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ

ಮೈಸೂರು: ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗರ್ಭಿಣಿ ಶವ ಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕಿನ ಬಿಳಿಕೆರೆ ಕೆರೆಯಲ್ಲಿ ಗೃಹಿಣಿ ಮೃತದೇಹ ಪತ್ತೆಯಾಗಿದ್ದು, ಮೃತಳನ್ನು ವಿಜಯನಗರದ ನಿವಾಸಿ ಅಶ್ವಿನಿ(23) ಎಂದು ಗುರುತಿಸಲಾಗಿದೆ. ಮೈಸೂರು ತಾಲೂಕಿನ ಮೈದನಹಳ್ಳಿ ನಿವಾಸಿ ಪ್ರಮೋದ್ ಹಾಗೂ ವಿಜಯನಗರ ನಿವಾಸಿ ಅಶ್ವಿನಿ ಇಬ್ಬರು ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ 2021 ಜೂನ್ 13 ರಂದು ವಿವಾಹವಾಗಿದ್ದರು.
ಏಳು ತಿಂಗಳ ಗರ್ಭಿಣಿಯಾಗಿದ್ದ ಅಶ್ವಿನಿ ಕೆಲ ದಿನಗಳ ಹಿಂದೆ ಗಂಡನ ಜೊತೆ ಮುನಿಸಿಕೊಂಡು ತವರು ಮನೆಗೆ ಸೇರಿದ್ದರು. ಭಾನುವಾರ ಮಧ್ಯಾಹ್ನ ವಿಜಯನಗರದಲ್ಲಿರುವ ಪತ್ನಿ ಮನೆ ಬಳಿ ಬಂದ ಪ್ರಮೋದ್, ಅಶ್ವಿನಿ ಜೊತೆ ಮಾತನಾಡಬೇಕು ಎಂದು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾನೆ. ರಾತ್ರಿಯಾದರೂ ಮಗಳು ಮನೆಗೆ ಬಾರದೇ ಇದ್ದಾಗ, ಮಗಳಿಗೆ ತಂದೆ ಹಲವು ಬಾರಿ ಫೋನ್ ಮಾಡಿದ್ದಾರೆ. ಆದರೆ ಅಶ್ವಿನಿ ರಿಸೀವ್ ಮಾಡಿಲ್ಲ. ನಂತರ ಪ್ರಮೋದ್ಗೆ ಕಾಲ್ ಮಾಡಿದ್ದು ಈ ವೇಳೆ ಪ್ರಮೋದ್ ಕರೆ ಸ್ವೀಕರಿಸಿಲ್ಲ. ಆದರೆ ಇಂದು ಬೆಳಗ್ಗೆ ಬಿಳಿಕೆರೆ ಸಮೀಪದ ಕೆರೆಯಲ್ಲಿ ಅಶ್ವಿನಿ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಬಂದ ಪೋಷಕರು ಮಗಳ ಶವ ನೋಡಿ ಅಳಿಯನೇ ಮಗಳನ್ನ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




