ಹೆಚ್ ಡಿ ಕೆ ಹಾಗೂ ಪಿ ಸಿ ಯೋಗೇಶ್ವರ್ ಕ್ಷೇತ್ರದ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಾರೆ

ರಾಮನಗರ: ರಾಜ್ಯದಲ್ಲಿ ತನ್ನದೇ ಆದ ಗೌರವಯುತವಾದ ಇತಿಹಾಸ ಹೊಂದಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ರಾಜಕಾರಿಣಿಗಳ ಕೆಸೆರೆರಚಾಟದಿಂದ ಕ್ಷೇತ್ರದ ಮಾರ್ಯದೆ ಹೋಗುತ್ತಿದೆ ಎಂದು ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ ವಿಷಾದ ವ್ಯಕ್ತಪಡಿಸಿದರು.
ಚನ್ನಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ಒಂದು ವಾರದಿಂದಲೂ ರಾಜ್ಯಮಟ್ಟದ ನಾಯಕರು ಒಬ್ಬರಿಂದ ಒಬ್ಬರಿಗೆ ಕೆಸರೆರಚಾಟ ಮಾಡುತ್ತಿರುವುದು ತಾಲ್ಲೂಕಿನ ಜನತೆ ನಾಚಿಸುವಂತಾಗಿದೆ. ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಚುನಾವಣೆಗೂ ಮೊದಲೇ ರಾಜಕೀಯ ವಾಕ್ಸಮರಕ್ಕೆ ಮುಂದಾಗಿದ್ದು, ಈ ಸಂದರ್ಭದಲ್ಲಿ ವೈಯಕ್ತಿಕ ವಿಚಾರಗಳನ್ನು ಬಳಸುತ್ತಾ ಮನೆ ಮಡದಿ ಹಾಗೂ ಅವರವರ ಭ್ರಷ್ಠಾಚಾರಗಳನ್ನು ಅವರುಗಳೇ ಹೇಳಿಕೆ ನೀಡುತ್ತಾ ತಮ್ಮ ಮಾನ ಮಾರ್ಯದೆಯ ಜೊತೆ ಕ್ಷೇತ್ರದ ಮಾನ ಮರ್ಯಾದೆ ಹಾಳು ಮಾಡುತ್ತಿದ್ದಾರೆಂದು ಕಿಡಿಕಾರಿದರು.
ತಾಲ್ಲೂಕು ಅನೇಕ ಸಾಹಿತಿಗಳು, ಅರ್ಥಶಾಸ್ತ್ರಜ್ಞರು, ಬುದ್ದಿ ಜೀವಿಗಳು, ಪ್ರಬುದ್ದ ರಾಜಕಾರಣಿಗಳನ್ನು ನೀಡಿದ ಕ್ಷೇತ್ರವನ್ನು ತಮ್ಮ ಭವಿಷ್ಯದ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಮಾಧ್ಯಮ ಸಂವಾದದಲಿ ತಮ್ನ ಸ್ಥಾನ ಮಾನಗಳನ್ನು ಗಾಳಿಗೆ ತೂರಿ ಏಕವಚನದಲ್ಲಿ ಪರಸ್ಪರ ಸಂಬೋದನೆ ಹಾಗೂ ತಮ್ಮ ಕುಟುಂಬದ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಹೇಳಿಕೆ ನೀಡುತ್ತಾ ರಾಜ್ಯವೇ ಚನ್ನಪಟ್ಟಣದ ನಾಯಕರ ಈ ರೀತಿಯ ಹೇಳಿಕೆಗಳನ್ನು ನೋಡಿ ವ್ಯಂಗ್ಯವಾಡುವಂತಾಗಿದೆ ಎಂದರು.
ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಾಗಿರುವ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರದೆ ಹಾಗೂ ಅಭಿವೃದ್ದಿ ವಿಚಾರದಲ್ಲಿ ಇಬ್ಬರು ಒಬ್ಬರಿಗಿಂತ ಒಬ್ಬರು ತಮ್ಮ ಸಾಧನೆ ಮಾಡುವುದನ್ನು ಬಿಟ್ಟು, ಅನಾವಶ್ಯಕವಾಗಿ ಕ್ಷೇತ್ರದಲ್ಲಿ ರಾಜಕೀಯವಾಗಿ ಸ್ಥಿರವಾಗಲು ಈ ರೀತಿಯಾಗಿ ಕೆಳಮಟ್ಟದ ಭಾಷಾ ಪ್ರಯೋಗವನ್ನು ಮುಂದಾದರೂ ನಿಲ್ಲಿಸಬೇಕೆಂದರು.
ತಾಲೂಕು ಅಧ್ಯಕ್ಷ ರಾಮೇಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‍ರವರು ರಾಜ್ಯದಲ್ಲಿ ತಮ್ಮದೇ ಆದ ಸ್ಥಾನಗಳನ್ನು ಪಡೆದಿರುವ ಗಣ್ಯರು. ಆದರೆ ಇತ್ತೀಚಿಗೆ ಇವರಿಬ್ಬರ ಮಧ್ಯೆ ನಡೆಯುತ್ತಿರುವ ತೇಜೋವಧೆಗಳನ್ನು ನೋಡಿದರೆ ಗ್ರಾಮೀಣ ಪ್ರದೇಶದವರು ಕೂಡ ಈ ರೀತಿಯಾಗಿ ನಡೆದುಕೊಳುವುದಿಲ್ಲವೆಂದರು.
ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಾಜು ಮಾತನಾಡಿ, ಕ್ಷೇತ್ರದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಲ್ಲೆಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗೆ ಗಮನ ನೀಡದೆ ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಮನ್ನಣೆ ನೀಡಿರುವ ಇಬ್ಬರು ನಾಯಕರು ಒಬ್ಬರ ಮೇಲೆ ಒಬ್ಬರು ಕೆಳಮಟ್ಟದ ಭಾಷೆಯನ್ನು ಪ್ರಯೋಗ ಮಾಡಿ ತಮ್ಮ ಮಾನದ ಜೊತೆ ಕ್ಷೇತ್ರದ ಮಾನವನ್ನು ಹಾಳುಗೆಡುವುತ್ತಿದ್ದಾರೆಂದರು.




