ಬೆಂಗಳೂರು ಗ್ರಾಮಾಂತರರಾಜ್ಯಸುದ್ದಿ

ಟೌನ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೋಲಿಸರ ನಿತ್ಯ ಕಿರಿಕಿರಿ

ದೇವನಹಳ್ಳಿ: ಮಾ20 ದಿನ ಬೆಳಗಾದರೆ ಪ್ರತಿನಿತ್ಯದ ಅಗತ್ಯಗಳಿಗೆ ದ್ವಿಚಕ್ರ ವಾಹನಗಳಲ್ಲಿ ಟೌನ್ ಒಳ ವ್ಯಾಪ್ತಿಯಲ್ಲಿ ನಿತ್ಯ ಓಡಾಡುವವರಿಗೆ ನಾಲ್ಕಾರು ಬಾರಿ ದಂಡ ವಿಧಿಸಿ ಟ್ರಾಫಿಕ್ ಪೋಲೀಸರು ವಿಪರೀತ ಕಿರುಕುಳ ಕೊಡುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಭಾನುವಾರ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ದೇವನಹಳ್ಳಿಯಲ್ಲಿ ಹಾಲು, ತರಕಾರಿ ಕುಡಿಯುವ ನೀರು, ತರಲು ನಿತ್ಯ ಓಡಾಡುವ ದ್ವಿಚಕ್ರ ವಾಹನ ಸವಾರರ ಮೇಲೆ ಟ್ರಾಫಿಕ್ ಪೋಲೀಸರು ವಿಪರೀತ ಕಾಟಕೊಡುತ್ತಿದ್ದಾರೆ ಸರ್ವೀಸ್ ರಸ್ತೆಗಳಲ್ಲಿ ಓಡಾಡುವವರು, ಹೊಲ ಗದ್ದೆಗಳಿಗೆ ಕೆಲಸಕ್ಕೆ ತೆರಳುವವರನ್ನು ಬಿಡದೆ ದಂಡ ಹಾಕುವ ನೆಪದಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.


ಟ್ರಾಫಿಕ್ ಪೋಲಿಸರು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಆಸಕ್ತಿ ತೋರಿಸದೆ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಕೆಲಸವನ್ನೆ ಕಾಯಕವಾಗಿಸಿದ್ದಾರೆ ಇದರಿಂದಾಗಿ ದೇವನಹಳ್ಳಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವುದೆ ಅಪರಾಧ ಎಂಬಂತಾಗಿದೆ. ದೇವನಹಳ್ಳಿ ಪಟ್ಟಣದಲ್ಲಿ ಪೋಲಿಸರು ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ರೋಲ್ ಕಾಲ್ ಮಾಡುವುದನ್ನು ತಡೆಯಬೇಕು ಇದೇ ಕೆಲಸವನ್ನು ಪೋಲೀಸರು ಹೆದ್ದಾರಿಯಲ್ಲಿ ಮಾಡಲಿ ಈ ಬಗ್ಗೆ ಶಾಸಕರು ಗಮನ ಹರಿಸಿ ಪೋಲಿಸರಿಗೆ ಮನವರಿಕೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ದೇವನಹಳ್ಳಿಯ ಪೋಲಿಸ್ ಠಾಣೆ ಸೇರಿದಂತೆ ಗಲ್ಲಿಗಳ ಮರೆಯಲ್ಲಿ ನಿಂತು ಪೋಲಿಸರು ತಮ್ಮ ಮೊಬೈಲ್ ಮೂಲಕ ವಾಹನಗಳ ಪೋಟೋ ಕ್ಲಿಕ್ಕಿಸಿ ಕೇಸು ದಾಖಲು ಮಾಡುತ್ತಿದ್ದಾರೆ. ಹೆಚ್ಚು ದಂಡ ವಸೂಲಿ ಮಾಡಬೇಕೆಂಬ ಗುರಿ ಇಟ್ಟುಕೊಂಡು ರಸ್ತೆಗೆ ಇಳಿಯುವ ಪೊಲೀಸರು, ವಿನಾಕಾರಣ ನಿತ್ಯ ಓಡಾಡುವವರ ವಾಹನಗಳನ್ನು ರಸ್ತೆಯಲ್ಲೇ ಅಡ್ಡಗಟ್ಟುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಪ್ರತಿ ದ್ವಿಚಕ್ರ ವಾಹನ ಸವಾರರಿಂದ 100 ರಿಂದ 500 ರವರೆಗೂ ವಸೂಲಿ ಮಾಡುತ್ತಿದ್ದು ಬೇರೆ ದಾರಿ ಇಲ್ಲದೆ ಸಾರ್ವಜನಿಕರು ಪೊಲೀಸರ ಜೊತೆ ವಾದ ಮಾಡದೇ ದಂಡ ಕಟ್ಟಿ ಹೋಗುತ್ತಿದ್ದಾರೆ.

ಇದನ್ನೇ ದುರುಪಯೋಗಪಡಿಸಿಕೊಂಡು ಪೊಲೀಸರು, ಜನರಿಗೆ ಕಿರಿಕಿರಿ ಉಂಟು ಮಾಡಿ ದಂಡ ಸಂಗ್ರಹಿಸುತ್ತಿದ್ದಾರೆ. ಇದನ್ನು ಕಾನೂನಿನಡಿ ಪ್ರಶ್ನಿಸಬೇಕಾದ ಸಂದರ್ಭ ಬಂದಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನಲ್ಲಿ ಪೋಲೀಸ್ ಸ್ಟೇಷನ್ ಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಎಂದು ಎರಡು ವ್ಯಾಪ್ತಿಯಲ್ಲಿ ಹಂಚಿಕೊಂಡಿದೆ. ಇದನ್ನು ಸರಿಪಡಿಸಿ ಒಂದೇ ಇಲಾಖೆಯ ಅಡಿಯಲ್ಲಿ ಪೋಲಿಸರು ಕಾರ್ಯನಿರ್ವಹಿಸುವಂತಾಗಬೇಕು ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ, ಪೋಲೀಸರು ಟೌನ್ ವ್ಯಾಪ್ತಿಯಲ್ಲಿ ದಂಡ ವಸೂಲಿ ಮಾಡುವ ಬಗ್ಗೆ ಪೋಲಿಸ್ ನಿಯಮದಡಿ ಯಾವ ರೀತಿಯ ನಿರ್ದೇಶನ ಇದೆ ಎಂಬುವುದನ್ನು ಪೋಲಿಸ್ ಇಲಾಖೆಯೊಂದಿಗೆ ಚರ್ಚಿಸಿ ಇದಕ್ಕೆ ಕಾನೂನಿನಡಿ ಯಾವ ರೀತಿಯ ಅವಕಾಶ ಇದೆ ಎಂಬುವುದನ್ನು ಪರಿಶೀಲಿಸಿ ಒಂದೆರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ದೂರು ನೀಡಲು ಬಂದ ಸಾರ್ವಜನಿಕರಿಗೆ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಬರವಸೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button