ಭಗವದ್ಗೀತೆ ಪಾಠ ಹೊಟ್ಟೆ ತುಂಬಿಸುತ್ತಾ?: ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ

ರಾಮನಗರ: ಸರ್ಕಾರದ ಮುಂದೆ ಟನ್ ಗಟ್ಟಲೇ ಸಮಸ್ಯೆಗಳ ಸರಮಾಲೆಯೇ ಇದೆ. ಮೊದಲು ಅವುಗಳನ್ನ ಸರಿಪಡಿಸಲಿ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬುತ್ತದೆಯೇ ಎಂದು ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸರ್ಕಾರದ ಮುಂದೆ ರಾಜ್ಯದಲ್ಲಿ ಬಗೆ ಹರಿಸುವ ಸಮಸ್ಯೆಗಳೆ ಸಾವಿರ ಸಂಖ್ಯೆಯಲ್ಲಿ ಇದ್ದಾವೆ. ಮೊದಲಿಗೆ ಆ ಸಮಸ್ಯೆಗಳನ್ನು ಬಗೆ ಹರಿಸುವ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬಲಿದೆಯೇ…! ನಾನು ಬೆಳಗ್ಗೆ ಹ್ಯಾಡ್ಸ್ ಅಂಡ್ ಕಲ್ಚರ್ ಎಂಬ ಬುಕ್ ಓದಿದೆ. ಅದರಲ್ಲಿ ಮೊದಲನೇಯ ಪ್ರಶ್ನೆ ಇದೇ. ನಾನ್ಯಾರು, ಎಲ್ಲಿಂದ ಬಂದೆ ಅಂದರೆ ಅದಕ್ಕೆ ಉತ್ತರವಿಲ್ಲ. ಇರೋವರೆಗೂ ನಮ್ಮ ಹಣೆಬರಹ ಏನು, ಹೋದ್ಮೆಲೆ ಏನು ಅನ್ನೋದು ಕೂಡ ಗೊತ್ತಿಲ್ಲ.ಯಾರಿಗೂ ಯಾವುದೂ ಕೂಡ ಶಾಶ್ವತ ಅಲ್ಲ.
ಈ ಭೂಮಿ ಹೇಗೆ ಉದ್ಭವ ಆಯ್ತು ಎಂದು ನಮಗೆ ನಿಮಗೆ ಗೊತ್ತಿದೆಯೇ..! ಬಿಜೆಪಿಯ ರಾಜ್ಯ – ಕೇಂದ್ರ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಅರಿವಿಲ್ಲ. ಅದನ್ನ ಬಗೆಹರಿಸುವುದು ಅವರಿಗೆ ಬೇಕಿಲ್ಲ ಎಂದರು. ಇನ್ನು ದೇಶದಲ್ಲಿ ಭಾವನಾತ್ಮಕವಾಗಿ ವಿಚಾರಗಳು ನಡೆಯುತ್ತಿವೆ. ಜನ ಸತ್ತರೇನು, ಹಸಿವಾದರೇನು, ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲದಿದ್ದರೇನು ಅದ್ಯಾವುದು ಚಿಂತೆ ಇಲ್ಲ. ಅಧಿಕಾರಕ್ಕಾಗಿ ಅಮಾಯಕರನ್ನ ಭಾವನಾತ್ಮಕವಾಗಿ ದಾರಿ ತಪ್ಪಿಸುತ್ತಿದ್ದಾರೆ. ಅಂತಹ ವಿಚಾರಗಳು ದೊಡ್ಡದಾಗಿ ಪ್ರಚಾರ ಆಗ್ತಿದೆ. ಇದಕ್ಕೂ ಒಂದು ಅಂತಿಮ ಇರುತ್ತದೆ, ಯಾರಿಗೂ ಶಾಶ್ವತ ಅಲ್ಲ. ರಾಜಮಹಾರಾಜರ ಕಾಲದಿಂದಲೂ ನೋಡಿದ್ದೇವೆ. ಅವುಗಳು ಉಳಿದವಾ, ಒಂದಲ್ಲಾ ಒಂದು ದಿನ ಎಲ್ಲವೂ ನಶಿಸಿಹೋಗಿವೆ. ಇದಕ್ಕೂ ಒಂದು ಅಂತ್ಯವಿದೆ ಕಾಯಬೇಕಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇನ್ನು ರಾಜ್ಯದಲ್ಲಿ ಇಂದು ಮೂರು ಕಡೆ ಅವಘಡಗಳಾಗಿವೆ. ತುಮಕೂರಿನ ಪಾವಗಡದಲ್ಲಿ ಕೂಡ ಖಾಸಗಿ ಬಸ್ ಅನಾಹುತವಾಗಿದ್ದು, ಆಕ್ಸಿಡೆಂಟ್ ನಲ್ಲಿ ಎಂಟತ್ತು ಮಂದಿ ಸಾವಿಗೀಡಾಗಿದ್ದಾರೆಂಬ ಸುದ್ದಿ ಇದೆ. ಬಡವರ ಮಂದಿ ಬಸ್ ಅವಘಡದಲ್ಲಿ ಸಾವಿಗೀಡಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡು ಚಿಂತಾಜನಕವಾಗಿದ್ದಾರೆ. ಸರ್ಕಾರ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಬೇಕು. ಸಾರಿಗೆ ಸಚಿವರು ಹಾಗೂ ಸರ್ಕಾರ ಮಾಹಿತಿ ಪಡೆಯಬೇಕು. ಕೂಡಲೇ ಮಾಹಿತಿ ಪಡೆದು ಪರಿಹಾರ ನೀಡುವ ಕಾರ್ಯವಾಗಬೇಕು. ಪಾವಗಡ ಅತ್ಯಂತ ಬರಗಾಲ ಇರುವ ತಾಲೂಕು. ಬಸ್ ಅವಘಡದಲ್ಲಿ ಕೂಲಿನಾಲಿ ಮಾಡುವ ಜನರಿದ್ದರೆ ಹೆಚ್ಚಿನ ಪರಿಹಾರ ನೀಡಬೇಕು. ಹೆಚ್ಚಿನ ಪರಿಹಾರ ನೀಡಬೇಕಾದುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದರು.
ಹಾಗೆಯೇ ಉಡುಪಿ ಹಾಗೂ ಬಳ್ಳಾರಿಯಲ್ಲಿ ಆಕ್ಸಿಜನ್ ಪ್ಲ್ಯಾಂಟ್ ನಲ್ಲೂಕೂಡ ಅವಘಡವಾಗಿದೆ. ಅಲ್ಲಿ ಸ್ಥಳ ಪರಿಶೀಲನೆ ಮಾಡಿ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಈ ಅನಾಹುತದಲ್ಲಿ ನೊಂದವರಿಗೆ ನೆರವು ಸಿಗಬೇಕು. ನೆರವಿಗೆ ಮುಂದಾಗಲಿ ಎಂದು ಸರ್ಕಾರಕ್ಕೆ ಹೇಳ ಬಯಸುತ್ತೇನೆ ಎಂದರು.
ಅಪಘಾತಕ್ಕೆ ಕಾರಣ ಏನಿರಬಹುದು…?
ಇನ್ನು ತುಮಕೂರಿನ ಬಸ್ ಅವಘಡದಲ್ಲಿ ಯಾರ ತಪ್ಪಿದೆ ಪರಿಶೀಲನೆ ನಡೆಯಬೇಕು. ಬಸ್ಸಿನ ಮೆಕಾನಿಕಲ್ ಸಮಸ್ಯೆ ಇನ್ನಿತರೆ ಕಾರಣವೋ ಪರಿಶೀಲಿಸಲಿ. ಅಲ್ಲಿ ವಿದ್ಯಾರ್ಥಿಗಳೇ ಸಾವಿಗೀಡಾಗಿದ್ದಾರೆ. ಇಲ್ಲಿ ಪ್ರಶ್ನೆ ಸರ್ಕಾರದ ಸಾರಿಗೆ ವ್ಯವಸ್ಥೆಯಲ್ಲಿ ಪರಿಸ್ಥಿತಿಯಾಗಿದ್ದು, ಸಾರಿಗೆ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ನಾನು 2006 ರಲ್ಲಿ ಸಿಎಂ ಆಗಿದ್ದಾಗ ಸಾರಿಗೆ ಲಾಭದಲ್ಲಿತ್ತು. ನಂತರದ ದಿನಗಳಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಳೆದ 10 ವರ್ಷಗಳಲ್ಲಿ ಏನೆಲ್ಲಾ ಅನಾಹುತವಾಗಿದೆ ಚರ್ಚೆ ಮಾಡಲು ಹೋಗಲ್ಲ.
ಸರ್ಕಾರ ಉತ್ತಮ ದರ್ಜೆಯ ಸಾರಿಗೆ ಸೌಲಭ್ಯ ಕಲ್ಲಿಸಬೇಕಿದೆ. ಆವಾಗ ಈ ರೀತಿಯ ಅನಾಹುತ ಘಟನೆಗಳ ನಡೆಯುವುದಿಲ್ಲ. ಸಾರ್ವಜನಿಕರು, ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ಬಸ್ ಕೂಡ ಏರಲ್ಲ. ಸಾರಿಗೆ ವ್ಯವಸ್ಥೆ ಉತ್ತಮವಾಗಿದಲ್ಲಿ ಇಂತಹ ಅನಾಹುತಗಳು ಕೂಡ ನಡೆಯಲ್ಲ ಎಂದು ಹರಿಹಾಯ್ದರು
ಕೋವಿಡ್ ಬಳಿಕ ಸಾರಿಗೆ ಇಲಾಖೆ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಸಾರಿಗೆ ನೌಕರರು, ಹಾಗೂ ಪ್ರಯಾಣಿಕರಿಗೆ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಯಾರೋ ಪ್ರತಿಭಟನೆ ಮಾಡಿಸಿ ಸಾರಿಗೆ ನೌಕರರನ್ನ ಬೀದಿಪಾಲು ಮಾಡಿದರು. ಸಾರಿಗೆ ನೌಕರರು ಇದೀಗ ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರಕ್ಕೆ ನನ್ನ ಸಲಹೆ ಏನು ಅಂದ್ರೆ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬಾರದು. ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರು ಅನಾನುಕೂಲ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ಕೊಟ್ಟರು.
