
ಇಂದೋರ್: ದೇಶ ವ್ಯಾಪಿ ಹೋಳಿ ಹಬ್ಬದ ಸಂಭ್ರಮದ ರಂಗು ಜೋರಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಹೋಳಿ ಹಬ್ಬದ ಆಚರಣೆಗೆ ಬ್ರೇಕ್ ಬಿದ್ದಿತ್ತು. ಆದ್ರೆ ಈ ಬಾರಿ ಹೋಳಿ ಹಬ್ಬಕ್ಕೆ ಕೊರೊನಾ ಅಡ್ಡಿಯುಂಟು ಮಾಡಿಲ್ಲ. ದೇಶದೆಲ್ಲಡೆ ಬಣ್ಣದ ಹಬ್ಬ ಹೋಳಿಯನ್ನ ಸಡಗರದಿಂದ ಆಚರಿಸಲಾಗುತ್ತಿದೆ. ಆದ್ರೆ ಇದೇ ಹೋಳಿ ಮಧ್ಯಪ್ರದೇಶದ ಇಂದೋರ್ ಸಮೀಪದ ಬಾನ್ಗಂಗಾ ಅನ್ನೋ ಏರಿಯಾದಲ್ಲಿ ಅವಘಡವೊಂದಕ್ಕೆ ಕಾರಣವಾಗಿದೆ.
ನಾಲ್ಕು ಮಂದಿ ಹೋಳಿ ಆಚರಣೆಯ ದಿನ ರಾತ್ರಿ ತಮ್ಮ ಮನೆ ಮುಂದೆ ಹಾಡು ಹಾಕಿಕೊಂಡು ಕುಣಿಯುತ್ತಿದ್ದರು. ಬಹುಶಃ ಎಲ್ಲರೂ ನಿಶೆಯಲ್ಲಿದ್ದರು ಅಂತ ಕಾಣುತ್ತೆ ಈ ವೇಳೆ ಹಾಡಿಗೆ ಸ್ಟೆಪ್ಸ್ ಹಾಕುತ್ತಾ ಹಾಕುತ್ತಲೇ ಗೋಪಾಲ್ ಸೋಲಂಕಿ ಎಂಬಾತ ತನ್ನ ಕಿಸೆಯಲ್ಲಿದ್ದ ಚಾಕು ತೆಗೆದವನೇ ತನ್ನ ಎದೆಗೆ ತಾನೇ ನಾಲ್ಕು ಬಾರಿ ಚುಚ್ಚಿಕೊಂಡಿದ್ದಾನೆ. ರಕ್ತ ಸೋರುತ್ತಿರುವುದನ್ನು ಗಮನಿಸಿದ ಸ್ನೇಹಿತನೊಬ್ಬ ಆತನನ್ನ ಹಿಡಿದು ಎಳೆದಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಸ್ಥಳದಲ್ಲೇ ಇದ್ದ ಸೋಲಂಕಿ ಸ್ನೇಹಿತರು ಹಾಗೂ ಬಂಧುಗಳು ತಕ್ಷಣ ಆತನನ್ನ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಿದರಾದ್ರೂ ಪ್ರಯೋಜನವಾಗಿಲ್ಲ. ತೀವ್ರ ರಕ್ತಸ್ರಾವದಿಂದ ಆತ ಕೊನೆ ಉಸಿರು ಎಳೆದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಗೋಪಾಲ್ ಚಾಕುವಿನಿಂದ ತನ್ನ ಎದೆಗೆ ತಾನೆ ಚುಚ್ಚಿಕೊಳ್ಳುತ್ತಿರೋ ದೃಶ್ಯ ಇದೀಗ ವೈರಲ್ ಆಗುತ್ತಿದೆ. ಹೋಳಿ ಹಬ್ಬ ಗೋಪಾಲ್ ಕುಟುಂಬಕ್ಕೆ ಮರೆಯಲಾರದ ಕಪ್ಪು ಚುಕ್ಕೆಯನ್ನ ಇಟ್ಟಂತಾಗಿದೆ.
