ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಇನೋವಾ: ಸ್ಥಳದಲ್ಲಿಯೇ ಇಬ್ಬರು ಸಾವು

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನಪ್ಪಿ, ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ನಡೆದಿದೆ.
ನಗರದ ಹೊರವಲಯದ ಗಬ್ಬೂರು ಬೈಪಾಸ ಬಳಿ ಈ ದುರ್ಘಟನೆ ನಡೆದಿದೆ. ರಂಜಿತಾ ಹಾಗೂ ರಾಕೇಶ್ ಮೃತ ದುರ್ದೈವಿಗಳು. ನಾಲ್ವರು ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಒಟ್ಟು ಆರು ಜನರು ದೊಡ್ಡಬಳಾಪುರದಿಂದ ದಾಂಡೇಲಿಗೆ ಟೂರ್‌ಗೆ ಹೊರಟ್ಟಿದ್ದರು ಎಂದು ತಿಳಿದು ಬಂದಿದೆ. ಹುಬ್ಬಳ್ಳಿಯ ಗೊಬ್ಬರ ಸಮೀಪಿಸುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಅಪಘಾತದ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ, ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
