ದುರ್ಗಾಂಬಿಕೆಗೆ ಉಘೇ.. ಉಘೇ.. ಹರಕೆ ತೀರಿಸಿದ ಭಕ್ತರು

ದಾವಣಗೆರೆ: ನಗರದ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಬಾಡೂಟದ ವಿಶೇಷತೆ. ನಗರದೆಲ್ಲೆಡೆ ಭಕ್ತರ ಮನೆಗಳಲ್ಲಿ ಭೂರಿ ಭೋಜನದ ಸಿದ್ಧತೆಗಳು ನಡೆದಿದೆ.
ಕಳೆದ ಹದಿನೈದು ದಿನಗಳಿಂದಲೂ ಬಾಡೂಟದ ಸಿದ್ಧತೆಗಳು ನಡೆದಿದ್ದು ಸಂಬಂಧಿಕರ ನಡುವೆ ಜನರು ಸಂಭ್ರಮದಿಂದ ಬಾಡೂಟ ಸವಿದಿದ್ದಾರೆ. ನಗರದ ಹಲವೆಡೆ ಶ್ಯಾಮಿಯಾನ ಹಾಕುವ ಮೂಲಕ ನಗರದೇವತೆಯ ಜಾತ್ರೆಗೆ ಆಗಮಿಸಿದ ಸಂಬಂಧಿಕರಿಗೆ, ಮನೆಮಕ್ಕಳಿಗೆ ಹಾಗೂ ಸ್ನೇಹಿತರಿಗೆ ಔತಣಕೂಟ ಏರ್ಪಡಿಸಿದ್ದಾರೆ.
ಪ್ರತಿಮನೆಯಲ್ಲಿ ಜನಜಂಗುಳಿಯೇ ಕಂಡುಬಂದಿತ್ತು. ಹರಕೆ ತೀರಿಸಿದ ಅನೇಕರು ದೀಡು ನಮಸ್ಕಾರ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು. ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಬೆಳಗಿನ ಜಾವ ಕೋಣ ಬಲಿ ನೀಡಲಾಯಿತು.
ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಪ್ರಾರಂಭದ ಮುನ್ನವೇ ಕೋಣ ಒಳಗೊಂಡಂತೆ ಯಾವುದೇ ಪ್ರಾಣಿಗಳನ್ನು ಸಾರ್ವಜನಿಕವಾಗಿ ಬಲಿ ನೀಡಲು ಅವಕಾಶ ನೀಡಲಾಗದು. ಒಂದೊಮ್ಮೆ ಪ್ರಾಣಿಬಲಿ ನಡೆದಿದ್ದು ರುಜುವಾತಾದಲ್ಲಿ ಸಂಬಂಧಿತರ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ದತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ 2017 ಮತ್ತು ನಿಯಮಗಳು 2020 ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿತ್ತು.
ದೇವಸ್ಥಾನ ಸಮಿತಿಯವರು ಸಹ ಕೋಣಬಲಿ ನೀಡುವುದಿಲ್ಲ. ಸಿರಿಂಜ್ ಮೂಲಕ ರಕ್ತ ಪಡೆದು, ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದ್ದರು. ಮಂಗಳವಾರ ರಾತ್ರಿಯಿಂದಲೇ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಒಳಗೊಂಡಂತೆ ವಿವಿಧ ಇಲಾಖೆಯ ಅಧಿಕಾರಿಗಳು ದೇವಸ್ಥಾನದ ಬಳಿ ಮೊಕ್ಕಾಂ ಹೂಡಿದ್ದರು.ಪ್ರತಿಯೊಂದು ಚಟುವಟಿಕೆ ಮೇಲೆ ನಿಗಾ ವಹಿಸಲಾಗಿತ್ತು.
