ಸಿಪಿವೈ ಪರ ಬ್ಯಾಟ್ ಬೀಸಿದ ಬಮೂಲ್ ಮಾಜಿ ನಿರ್ದೇಶಕ!

ರಾಮನಗರ: ಬಮೂಲ್ ಚುನಾವಣೆ ಹಾಗೂ ಒಕ್ಕಲಿಗರ ಸಂಘದ ಚುನಾವಣೆ ವೇಳೆ ಬೆಂಬಲ ಕೋರಿ ಮಾಜಿ ಸಚಿವ, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಅವರ ಕಾಲು ಹಿಡಿದಿದ್ದ ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರಿಗೆ ಯೋಗೇಶ್ವರ್ ಟೀಕಿಸುವ ನೈತಿಕತೆ ಇಲ್ಲ ಎಂದು ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ಕುಮಾರ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಯೋಗೇಶ್ವರ್ ಅವರ ಬಗ್ಗೆ ಲಘುವಾಗಿ ಟೀಕೆ ಮಾಡುವ ಮುನ್ನ ತಮ್ಮ ಯೋಗ್ಯತೆ ಅರಿತು ಮಾತನಾಡಬೇಕು, ಅವಕಾಶವಾದಿಯಾದ ಇವರು, ತಾಲೂಕಿನಲ್ಲಿ ಎಷ್ಟು ವರ್ಷ ರಾಜಕಾರಣ ಮಾಡಿದ್ದಾರೆ, ಯಾವ ರೀತಿ ರಾಜಕಾರಣಕ್ಕೆ ಬಂದಿದ್ದಾರೆ ಎಂಬುದು ತಾಲೂಕಿನ ಜನತೆಗೆ ಗೊತ್ತಿದೆ, ಕುಮಾರಸ್ವಾಮಿ ಅವರನ್ನು ಮೆಚ್ಚಿಸಲು ಮನಬಂದಂತೆ ಮಾತನಾಡುವ ಮುನ್ನ ಯೋಚಿಸಿ ಮಾತನಾಡಲಿ ಎಂದು ತಿರುಗೇಟು ನೀಡಿದರು.
ತಾಲೂಕು ಜೆಡಿಎಸ್ ಹಾಳಾಗಲು ಜಯಮುತ್ತು ನೇರ ಕಾರಣ, ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ರಾಜ್ಯ ನಾಯಕರು, ಅವರು ಹೇಳಿಕೆ, ಸ್ಪಷ್ಟೀಕರಣ ಕೊಡುತ್ತಾರೆ, ಮೇಲಿನವರ ಬಗ್ಗೆ ಟೀಕಿಸಲು ಇವರ್ಯಾರು, ಯೋಗೇಶ್ವರ್ ಅವರಿಗೆ ಮತಿಭ್ರಮಣೆಯಾಗಿದೆ ಎನ್ನುವ ಮುನ್ನ ನೀವು ಸರಿಯಿದ್ದೀರಾ ನೋಡಿಕೊಳ್ಳಿ, ಈ ಹಿಂದೆ ಜೆಡಿಎಸ್ ಕಚೇರಿಯಲ್ಲಿ ರೌಡಿಯಂತೆ ಚೇರ್ ಹೊಡೆಸಿದ್ದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಇವರು ಊರಿನಿಂದ ಬೆಂಗಳೂರಿಗೆ ಹೋಗಿ ಕಬ್ಬಿಣದಲ್ಲಿ ಏನೇನು ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಮಾತನಾಡುವ ಮುನ್ನ ಎಚ್ಚರವಿರಲಿ ಎಂದರು.
ಬೊಂಬೆನಾಡಿನ ಅಭಿವೃದ್ಧಿಗಾಗಿ ಸಿಪಿವೈ ಅವರ ಕೊಡುಗೆ ಏನೆಂಬುದು ಸಾರ್ವಜನಿಕರಿಗೆ ತಿಳಿದಿದೆ, ಅದಕ್ಕೆ ಯಾರ ಸರ್ಟಿಫಿಕೇಟ್ ಬೇಕಿಲ್ಲ, ಕಳೆದ 20 ವರ್ಷಗಳಿಂದ ಚನ್ನಪಟ್ಟಣ ತಾಲೂಕಿನಲ್ಲಿ ಆಗಿರುವ ಸಾಧನೆಯನ್ನು ಪ್ರತಿ ಗ್ರಾಮದ ರೈತರು ಹೇಳುತ್ತಾರೆ, ಇಗ್ಗಲೂರಿನಿಂದ ಕಣ್ವದವರೆಗೆ ಏತ ನೀರಾವರಿ ಮೂಲಕ ನೀರನ್ನು ತಂದ ಪರಿಣಾಮವಾಗಿ ಇಂದು ರೈತರು ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ ಎಂದರು.
ಇನ್ನು ಜೆಡಿಎಸ್ನ ಮುಖಂಡ. ನಾಗರಾಜು ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪ್ರಚಾರ ಮಾಡುವುದು ಬಿಟ್ಟು ಹಣಕ್ಕಾಗಿ ಯಾವ ಸ್ಥಳಗಳಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂಬುದು ಗೊತ್ತಿದೆ, ಮುಖಂಡರಿಂದ 25 ಸಾವಿರ ಹಣ ಪಡೆಯಲು ಮಂಡ್ಯದ ಅಮರಾವತಿ ಹೋಟೆಲ್ನಲ್ಲಿ ದಿನವಿಡೀ ಕೂತಿದ್ದರು, ತಾಲೂಕಿನಲ್ಲಿ ಸಮರ್ಪಕವಾಗಿ ಅಭ್ಯರ್ಥಿ ಪ್ರಚಾರ ಕೈಗೊಳ್ಳದ ಕಾರಣ ಸೋಲಾಯಿತೇ ವಿನಃ ಬೇರ್ಯಾರೂ ಅವರನ್ನು ಸೋಲಿಸಿಲ್ಲ, ಹಣ ಸಂಗ್ರಹ ಮಾಡಿಕೊಳ್ಳಲು ಚುನಾವಣೆಯನ್ನು ಬಳಕೆ ಮಾಡಿಕೊಂಡರು. ಅಷ್ಟು ವರ್ಷ ಹಣವಿಲ್ಲದೆ ಮನೆ ನಿರ್ಮಿಸಲೂ ಸಾಧ್ಯವಾಗದಿದ್ದ ಅವರು ಚುನಾವಣೆ ಮುಗಿದ ಕೂಡಲೇ ಸಿಂಗರಾಜಪುರದಲ್ಲಿ ಮನೆ ನಿರ್ಮಾಣ ಮಾಡಿದರು, ರಾಮನಗರದಲ್ಲಿ ಸೈಟ್ ಕೊಂಡು ಮನೆ ಕಟ್ಟಿದರು. ಅದು ಹೇಗೆ ಸಾಧ್ಯವಾಯಿತು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಲವೇಗೌಡ ಮಾತನಾಡಿ, ಖಾಸಗಿ ಬಸ್ ನಿಲ್ದಾಣದ ವಿಚಾರದಲ್ಲಿ ಸುಖಾಸುಮ್ಮನೆ ಆರೋಪ ಹೊರಿಸಿರುವ ಕುಮಾರಸ್ವಾಮಿ ಅವರಿಗೆ ಕನಿಷ್ಟ ಇದುವರೆಗೂ ಕಾಮಗಾರಿಗೆ ಹಣ ಬಿಡುಗಡೆಯಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವ ಪ್ರಜ್ಞೆಯಿಲ್ಲ, ನಿಲ್ದಾಣದ ಕೆಳಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ ಎಂದು ಗುತ್ತಿಗೆ ಪಡೆದಿರುವ ಸಂಸ್ಥೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ, ಕುಮಾರಸ್ವಾಮಿ ಅವರು ಯಾವುದೇ ಆಧಾರವಿಲ್ಲದೆ 4 ಕೋಟಿರೂ. ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ, ಇದು ಅವರ ಘನತೆಗೆ ತಕ್ಕದಲ್ಲಎಂದರು.
ಕ್ಷೇತ್ರದ ಶಾಸಕರಾಗಿ 4ವರ್ಷ ಕಳೆಯುತ್ತಿದ್ದರು ಇದುವರೆಗೂ ತಾಲೂಕಿನಲ್ಲಿ ಕಾಣುತ್ತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆ ಕಿಂಚಿತ್ತು ಸ್ಪಂದಿಸಿಲ್ಲ, ಮುಖ್ಯಮಂತ್ರಿಯಾಗಿದ್ದಾಗ ಒಳಚರಂಡಿ ಕಾಮಗಾರಿಗೆ ಅನುಮೋದನೆ ಕೊಟ್ಟಿದ್ದರೆ ಜನ ನೆಮ್ಮದಿ ಬದುಕು ಸಾಗಿಸುತ್ತಿದ್ದರು, ಕೇವಲ ರಸ್ತೆಗಳ ಅಭಿವೃದ್ದಿ ಮಾಡಿದರಷ್ಟೇ ಸಾಕೇ ಬೇರೆ ಅಭಿವೃದ್ದಿ ಬೇಡವೇ, ಮಾಜಿ ಸಿಎಂ ಈ ಬಗ್ಗೆ ಮುಂದಿನ ದಿನಗಳಲ್ಲಾದರೂ ಗಮನಹರಿಸಲಿ, ಯೋಗೇಶ್ವರ್ ಅವರನ್ನು ಸುಖಾಸುಮ್ಮನೆ ಟೀಕೆ ಮಾಡುವುದನ್ನು ಬಿಡಲಿ ಎಂದರು.
ತಾ.ಪಂ. ಮಾಜಿ ಅಧ್ಯಕ್ಷ ಹೆಚ್. ರಾಜಣ್ಣ ಮಾತನಾಡಿ, ಕಳೆದ 25 ವರ್ಷ ತಾಲೂಕಿನಲ್ಲಿ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿ ತಮ್ಮ ಮುಂದಾಲೋಚನೆಯ ಫಲವಾಗಿ ಸಾಕಷ್ಟು ಅಭಿವೃದ್ದಿ ಮಾಡಿರುವ ಯೋಗೇಶ್ವರ್ ಅವರನ್ನು ಟೀಕಿಸುವ ನೈತಿಕತೆ ಯಾವ ಮುಖಂಡರಿಗೂ ಇಲ್ಲ, ಚನ್ನಪಟ್ಟಣ ತಾಲೂಕು ಈಗ ಮೂರು ವರ್ಷಗಳಿಂದ ಮಾತ್ರ ಸಂಪದ್ಭರಿತವಾಯಿತೇ,ಇದಕ್ಕೂ ಮೊದಲು ಮನೆಗಳಿರಲಿಲ್ಲವೇ, ಸೌಲಭ್ಯಗಳಿರಲಿಲ್ಲವೇ, ಶಾಲಾ, ಕಾಲೇಜುಗಳು ಇರಲಿಲ್ಲವೇ, ಕಾರುಗಳಿರಲಿಲ್ಲವೇ ಎಂದು ಪ್ರಶ್ನಿಸಿದರು.
ಯೋಗೇಶ್ವರ್ ಅವರ ಸಾಧನೆ ಬಗ್ಗೆ ತಾಲೂಕಿನ ಜನತೆಗೆ ತಿಳಿದಿದೆ, ಏನೂ ಮಾಡಿಲ್ಲ ಎನ್ನುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
