ಬಂಧಿಸಲು ಬಂದ ಪೊಲೀಸ್ ಕಾಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಂಚಿದ ಯುವಕ

ಚಿಕ್ಕಮಗಳೂರು: ತಂದೆ, ತಾಯಿ ವಾಸವಿದ್ದು ಮನೆಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿ ಯುವಕ ತನ್ನನ್ನ ಬಂಧಿಸಲು ಬಂದಿದ್ದ ಪೊಲೀಸರ ಕಾಲಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಂಬೇಕಾಡು ಎಂಬಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಗೆ ಗ್ರಾಮದ ಜಂಬೇಕಾಡಿನ 25 ವರ್ಷದ ಯುವ ದೇವರಾಜ್ ಪೊಲೀಸರ ಕಾಲಿಗೆ ಬೆಂಕಿ ಹಚ್ಚಿದ ಯುವಕ. ದೇವರಾಜ್ ಸಾಕಷ್ಟು ಹಿಂದಿನಿಂದಲೂ ಗ್ರಾಮಸ್ಥರು ಹಾಗೂ ಹೆತ್ತವರ ಜೊತೆ ಸದಾ ಜಗಳವಾಡುತ್ತಿದ್ದ. ಅಂತೆಯೇ ನಿನ್ನೆ ಕೂಡ ಮನೆಯವರ ಜೊತೆ ಜಗಳವಾಡಿದ್ದು ಜಗಳ ವಿಕೋಪಕ್ಕೆ ಹೋಗಿದೆ. ಇದರಿಂದ ರೊಚ್ಚಿಗೆದ್ದ ದೇವರಾಜ್ ಹೆತ್ತವರು ವಾಸವಿದ್ದ ಮನೆಗೆ ಬೆಂಕಿ ಹಚ್ಚಿದ್ದಾನೆ. ಕೂಡಲೆ ಸ್ಥಳೀಯರು ಎಮರ್ಜೆನ್ಸಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಜಗದೀಶ್ ಹೆತ್ತವರ ರಕ್ಷಣೆಗೆ ಬಂದ 112 ಪೊಲೀಸ್ ಜೀಪ್ ಚಾಲಕ ತ್ರಿಮೂರ್ತಿ ಮೇಲೂ ಕೋಪಗೊಂಡು ಅವರ ಕಾಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಸ್ಥಳೀಯರು ತ್ರಿಮೂರ್ತಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆರೋಪಿಯನ್ನ ಗ್ರಾಮಸ್ಥರು ಸೇರಿ ಮರಕ್ಕೆ ಕಟ್ಟಿ ಹಾಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
