ಇಂದು ಭಗತ್ ಸಿಂಗ್ ಪೂರ್ವಜರ ಊರಿನಲ್ಲಿ ಭಗವಂತ್ ಮಾನ್ ಸಿಎಂ ಪ್ರಮಾಣ ವಚನ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಭಗವಂತ ಮಾನ್ ಇಂದು ಪಂಜಾಬ್ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ಇಂದಿನಿಂದ ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷದ ಶಕೆ ಶುರುವಾಗಲಿದ್ದು, ಭಗವಂತ್ ಮಾನ್ ಗದ್ದುಗೆ ಏರಲಿರೋ ಸಂಭ್ರಮಕ್ಕೆ ಈಗಾಗ್ಲೆ ಭರ್ಜರಿ ತಯಾರಿ ನಡೆದಿದೆ.
48 ವರ್ಷ ಹರೆಯದ ಭಗವಂತ್ ಮಾನ್ ಪ್ರಮಾಣ ವಚನ ಸಮಾರಂಭವು ನವನ್ ಶಹರ್ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಡ್ಕರ್ ಕಲಾನ್ ನಲ್ಲಿ ನಡೆಯಲಿದೆ. ಇಂದು ಮಧ್ಯಾಹ್ನ 12.30ಕ್ಕೆ ಭಗವಂತ್ ಮಾನ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಳೆದ ಶನಿವಾರ ಪಂಜಾಬ್ ರಾಜಭವನದಲ್ಲಿ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರನ್ನ ಭೇಟಿ ಮಾಡಿದ್ದ ಭಗವಂತ್ ಮಾನ್ ತಮ್ಮ ಸರ್ಕಾರ ಉತ್ತಮ ಸಚಿವ ಸಂಪುಟ ಹೊಂದಿರಲಿದೆ ಎಂದು ಹೇಳಿದ್ದರು. ಹೀಗಾಗಿ ಭಗವಂತ್ ಮಾನ್ ಅವರ ಜೊತೆ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅನ್ನೋ ಕುತೂಹಲ ಶುರುವಾಗಿದೆ.
ಇತ್ತೀಚೆಗೆ ಪಜಾಬಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದ ಭಗವಂತ್ ಮಾನ್ ಸಂಗ್ರೂರಿನ ಜನರು ನನ್ನ ಮೇಲೆ ಬಹಳ ಪ್ರೀತಿಯನ್ನ ಧಾರೆಯೆರೆದಿದ್ದಾರೆ. ಇದಕ್ಕಾಗಿ ತುಂಬಾ ಧನ್ಯವಾದಗಳು. ಈಗ ಇಡೀ ಪಂಜಾಬ್ ಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಸಂಗ್ರೂರಿನ ಜನರಿಗೆ ನಾನು ಭರವಸೆ ನೀಡುತ್ತೇನೆ. ಕೆಲವೇ ತಿಂಗಳುಗಳಲ್ಲಿ ಲೋಕಸಭೆಯಲ್ಲಿ ನಮ್ಮ ಧ್ವನಿಯನ್ನು ಮತ್ತೆ ಕೇಳಿಸಲಾಗುವುದು ಎಂದು ಟ್ವೀಟ್ ಮಾಡದ್ದಾರೆ.
