ರೌಡಿ ಶೀಟರ್ ಅಕ್ಬರ್ ಹತ್ಯೆ: ಐವರು ಆರೋಪಿಗಳು ಅರೆಸ್ಟ್!

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಅರವಿಂದ ನಗರದ ಪಿ ಅಂಡ್ ಟಿ ಕ್ವಾರ್ಟಸ್ ಬಳಿ ಕಳೆದ ಶುಕ್ರವಾರ ಬೆಳಗಿನ ಜಾವ ರೌಡಿ ಶೀಟರ್ ಅಕ್ಬರ್ ಮುಲ್ಲಾನನ್ನು ಬರ್ಬರವಾಗಿ ಕೊಲ್ಲಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಳೇ ಹುಬ್ಬಳ್ಳಿಯ ಠಾಣೆಯ ಪೊಲೀಸರು ತನಿಖೆ ಚುರುಕುಗೊಳ್ಳಿಸಿ ಇದೀಗ ಕೃತ್ಯಕ್ಕೆ ಸಂಬಂಧಿಸಿದಂತೆ ಮತ್ತೆ ಐವರನ್ನು ಬಂಧಿಸಿದ್ದಾರೆ.
ಕಳೆದ ಶುಕ್ರವಾರ ತಡ ರಾತ್ರಿ ತನ್ನ ಮನೆಗೆ ತೆರಳುತ್ತಿದ್ದ ಅಕ್ಟರ್ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ನಂತರ ಪ್ರಕರಣದ ಪ್ರಮುಖ ಆರೋಪಿ ಸದಾನಂದ ಬುರ್ಲಿ ಎಂಬಾತ ತಾನೇ ಕೊಲೆ ಮಾಡಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದ. ಇವನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದ ಹಳೇ ಹುಬ್ಬಳ್ಳಿಯ ಪೊಲೀಸರು ಕಾರ್ಯಚರಣೆ ನಡೆಸಿ ನವೀನ್ ಪೆರೂರ, ಈತನ ಸಹೋದರ ರೋಹಿತ್, ವರುಣ, ಗೋಪಾಲ ಹಾಗೂ ಮಹೇಶ ಎಂಬುವವರನ್ನ ಬಂಧಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದ ತಂಡ, ಮೇಲ್ಕಂಡ ಐವರು ಆರೋಪಿಗಳನ್ನ ಬಂಧಿಸಿದ್ದು ಈ ಮೂಲಕ ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತಾದರೂ ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬರಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.
