Breaking NewsLatestಚರ್ಚೆಜಿಲ್ಲಾ ಸುದ್ದಿರಾಜಕೀಯರಾಜ್ಯರಾಮನಗರಸುದ್ದಿ

ಯೋಗೇಶ್ವರ್ ಗೆ ಸಿಗುವುದೇ ಮಂತ್ರಿ ಯೋಗ?

ರಾಜೇಶ್ ಕೊಂಡಾಪುರ

ರಾಮನಗರ: ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿರುವ ಬಿಜೆಪಿ ಸರ್ಕಾರ ಇದೀಗ ರಾಜ್ಯದಲ್ಲೂ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಈಗಿನಿಂದಲೇ ತಯಾರಿ ನಡೆಸಿದೆ. ಇದರಿಂದಾಗಿ ಪಕ್ಷ ಮತ್ತು ಸರ್ಕಾರದಲ್ಲಿ ಬಾರಿ ಬದಲಾವಣೆ ಮಾಡಲಿರುವ ಬಗ್ಗೆ ಮಾಹಿತಿ ಈಗಾಗಲೇ ಲಭ್ಯವಾಗಿದ್ದು, ಸಂಪುಟದಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗಿರುವ ಬಿಜೆಪಿ ವರಿಷ್ಟರು ಅಧಿಕಾರದಲ್ಲಿರುವ ಹಲವು ಸಚಿವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಲಿದ್ದು, ಇನ್ನು ಕೆಲವರಿಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದೆ ನಡೆಯಬಹುದಾದ ಬದಲಾವಣೆಯಲ್ಲಿವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಯುಗಾದಿಗೆ ಮಂತ್ರಿ ಯೋಗದ ಗಿಫ್ಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ.  ಹೇಳಿ ಕೇಳಿ ರಾಮನಗರ ಜಿಲ್ಲೆ ಹೆಚ್ಡಿ ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರಾಬಲ್ಯವಿರುವ ಜಿಲ್ಲೆ. ಈಗ ಇವರಿಬ್ಬರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಪೈಪೋಟಿ ಇರುವುದು ಸತ್ಯ. ಆದರೇ ಬಿಜೆಪಿ ಚನ್ನಪಟ್ಟಣ ಹೊರತುಪಡಿಸಿದರೇ ಬೇರೆ ತಾಲೂಕುಗಳಲ್ಲಿ ನಗಣ್ಯ. ಹೆಚ್ಡಿಕೆ ಮತ್ತು ಡಿಕೆಶಿ ವಿರುದ್ಧ ಸದಾ ಕೆಂಡಕಾರುವ ಯೋಗೇಶ್ವರ್ಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನಕೊಟ್ಟರೇ ರಾಮನಗರ ಮತ್ತು ನೆರೆಯ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯಾಗುತ್ತದೆ ಎನ್ನುವ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿದೆ.

ಈ ಕಾರಣದಿಂದಲೇ ಯೋಗೇಶ್ವರ್‌ಗೆ ಪ್ರಮುಖ ಖಾತೆ ನೀಡಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲಿದ್ದಾರೆ ಎಂಬ ಮಾಹಿತಿ ಇದ್ದು, ತಮ್ಮ ಆರ್ಥಿಕ ಮತ್ತು  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿಸಿ, ಬಿಜೆಪಿ ಸರ್ಕಾರ ಬರಲು ತಮ್ಮ ಪಾತ್ರದ ಬಗ್ಗೆ ಕಮಲ ಪಾಲಕರ ಗಮನ ಸೆಳೆದು, ಮಂತ್ರಿಗಿರಿ ಗಿಟ್ಟಿಸಿಕೊಳ್ಳಲಿದ್ದಾರೆಂದು ಚರ್ಚೆಯಾಗುತ್ತಿದೆ.

ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿಮಾಡಿಕೊಳ್ಳುವುದಿಲ್ಲ ಎಂಬ ಸಂಗತಿಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಮುಖಂಡ ಅರುಣ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ. ಇದೀಗ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಿಜೆಪಿಗೆ ಅಗತ್ಯವಾಗಿದ್ದು ಇದಕ್ಕಾಗಿ ಯೋಗೇಶ್ವರ್‌ಗೆ ಅಧಿಕಾರ ನೀಡಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದ್ದು, ಯೋಗೇಶ್ವರ್ ಇದೀಗ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವುದು ಖಚಿತ ಎನ್ನಲಾಗುತ್ತಿದೆ.

ಹಾಗೆಯೇ ಪಕ್ಷದ ಸೂಚನೆಯಂತೆ ಒಮ್ಮೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗ ಡಿ.ಕೆ.ಬ್ರದರ್ಸ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಗೆ ರಾಜಕೀಯವಾಗಿ ಸೆಡ್ಡು ಹೊಡೆದಿದ್ದರು. ರಾಮನಗರ ಜಿಲ್ಲೆಯ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು.

2023ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಶಕ್ತಿಬರಬೇಕು. ಅದರಲ್ಲಿಯೂ ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತ ಸೆಳೆಯಲು, ಆ ವರ್ಚಸ್ಸು ಇರುವ ಪ್ರಬಲ ನಾಯಕ ಯೋಗೇಶ್ವರ್ಗೆ ಸಚಿವ ಸ್ಥಾನ ಫಿಕ್ಸ್ ಎಂದು ಆರ್‌ಎಸ್‌ಎಸ್ ಮೂಲಕ್ಕೆ ಮಾಹಿತಿ ಕಳಿಸುವ ಕೆಲಸವು ನಡೆಯುತ್ತಿದೆ.  ಒಟ್ಟಾರೆ, ಆರ್ ಎಸ್ ಎಸ್ ಜೊತೆಗೆ ಸಮೀಪವಾಗುತ್ತಿರುವ ಯೋಗೇಶ್ವರ್, ಮಂತ್ರಿ ಸ್ಥಾನ ಪಡೆಯಲೇಬೇಕೆನ್ನುವ ಪ್ರಬಲ ಯತ್ನದಲ್ಲಿದ್ದಾರೆ. ಮುಂದೆನಾಗುವುದೋ ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button