ಕಲಬುರಗಿ ಜೈಲಿನಿಂದ ಓರ್ವ ಮಹಿಳೆ ಸೇರಿ 18 ಕೈದಿಗಳು ಬಿಡುಗಡೆ

ಕಲಬುರಗಿ: ಅವರೆಲ್ಲಾ ದುಡುಕಿನ ನಿರ್ಧಾರದಿಂದ ಜೈಲು ಸೇರಿದರು, ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಹದಿನಾಲ್ಕು ವರ್ಷ ಜೈಲಿನಲ್ಲಿ ವನವಾಸ ಅನುಭವಿಸಿದ ಆ ಜೈಲು ಹಕ್ಕಿಗಳಿಗೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಜನ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಕಲಬುರಗಿ ಜೈಲಿನಿಂದ ಬಿಡುಗಡೆ ಗೊಳಿಸಲಾಗಿದೆ. ಪಳನಿ, ಭೀಮನಗೌಡ, ರಾಚಪ್ಪ, ಜಗನ್ನಾಥ, ಸುರೇಶ್, ಮಹಾದೇವಿ ಭಡನೋರ್ ಸೇರಿ 18 ಜನರನ್ನ ಬಿಡುಗಡೆ ಮಾಡಲಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷಗಳ ಕಾಲ ಕಲಬುರಗಿ ಜಿಲ್ಲೆ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ ಬಂಧಿಗಳನ್ನು ಸ್ಥಾಯಿ ಸಲಹಾ ಸಮಿತಿ ಶಿಫಾರಸ್ಸಿನಂತೆ ಸರ್ಕಾರಕ್ಕೆ ಕಳಿಸಲಾಗಿತ್ತು. ಸರ್ಕಾರದ ಆದೇಶದಂತೆ ಓರ್ವ ಮಹಿಳೆ ಸೇರಿ 18 ಜನ ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡಲಾಗಿದೆ.
ಜೈಲು ಅಧೀಕ್ಷಕರಾದ ಪಿ ಎಸ್ ರಮೇಶರವರು ಬಿಡುಗಡೆಯಾದ ಬಂಧಿಗಳಿಗೆ ಶುಭಕೋರಿದ್ರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಿಡುಗಡೆ ಪ್ರಮಾಣ ಪತ್ರಗಳನ್ನು ನೀಡಿದ್ರು. ಇದೆ ಸಂದರ್ಭದಲ್ಲಿ ಸಿಜೆಎಂ ಅವರು ಉಪಸ್ಥಿತಿತರಿದ್ದರು.
ಒಟ್ಟಿನಲ್ಲಿ ತಿಳಿದೊ ತಿಳಿಯದೆ ಮಾಡಿದ ತಪ್ಪಿಗೆ ಹದಿನಾಲ್ಕು ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರ ಹೊರಟಿರುವ ಜೈಲು ಬಂಧಿಗಳು, ಮಾಡಿದ ತಪ್ಪಿನ ಅರಿವಾಗಿದೆ ಮುಂದೆ ನಮ್ಮ ಕುಟುಂಬದೊಂದಿಗೆ ಒಳ್ಳೆಯ ಜೀವನ ಸಾಗಿಸುತ್ತೆವೆ. ಮುಂದೆಂದು ಇಂತಹ ಅಪರಾಧಗಳಲ್ಲಿ ಭಾಗಿಯಾಗುವುದಿಲ್ಲ ಎಂದು ತಪ್ಪಿನ ಅರಿವು ಮಾಡಿಕೊಂಡು ಭಾವುಕರಾದರು.
