ಪಂಚರಾಜ್ಯ ಚುನಾವಣೆ ರಿಸಲ್ಟ್ ಎಫೆಕ್ಟ್; ಕಾಂಗ್ರೆಸ್ ಸೇರ್ತೀನಿ ಅಂದವ್ರು ಸೈಲೆಂಟ್ ಆದ್ರು!

ರಾಮನಗರ: ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದ ಉಮೇಶ್ ಕತ್ತಿ, ಕೆ.ಗೋಪಾಲಯ್ಯ, ನಾರಾಯಣ ಗೌಡ, ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಏಳು ಮಂದಿ ಸಚಿವರು, ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ದಂಡು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿ ದಿಗಿಲುಗೊಂಡು ಸೈಲೆಂಟ್ ಆಗಿಬಿಟ್ಟಿದ್ದಾರೆ. ಸದಾ ಅಧಿಕಾರಕ್ಕೆ ಅಂಟಿಕೊಂಡಿರಲು ತವಕಿಸುವ ಬಿಜೆಪಿ ಮತ್ತು ಜೆಡಿಎಸ್ನ ಹಲವು ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಆಶಾಭಾವನೆಯೊಂದಿಗೆ ತಾವಿರುವ ಪಕ್ಷಗಳನ್ನು ತೊರೆದು ಹಸ್ತ ಹಿಡಿಯಲು ಮುಂದಾಗಿದ್ದರು. ಬಹುತೇಕ ಈ ಎಲ್ಲ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಒಂದೆರಡು ಸುತ್ತಿನ ಮಾತುಕತೆಯನ್ನೂ ನಡೆಸಿದ್ದರು.
ತಮ್ಮ ಪಕ್ಷಕ್ಕೆ ನೆಲೆಯಿಲ್ಲದ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ನಲ್ಲಿನ ವರ್ಚಸ್ಸುಳ್ಳ ಮುಖಂಡರು ಮತ್ತು ಶಾಸಕರನ್ನು ಸೆಳೆಯಲು ಕಾಂಗ್ರೆಸ್ ನಾಯಕರು ಸಹ ಕಳೆದ ಒಂದು ವರ್ಷದಿಂದ ನಿರಂತರ ಪ್ರಯತ್ನ ಮಾಡಿ, ಬಹುತೇಕ ಯಶಸ್ಸನ್ನೂ ಕಂಡಿದ್ದರು. ಇದು ಸಾಲದೆಂಬಂತೆ ಮತ್ತಷ್ಟು ಮಂದಿ ಪ್ರಭಾವಿ ಹಾಗೂ ವರ್ಚಸ್ಸಿನ ನಾಯಕರನ್ನು ಸೆಳೆದು 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ತಂದುಕೊಳ್ಳುವ ಕಸರತ್ತು ನಡೆಸಿದ್ದರು. ಒಂದೆಡೆ ಪಕ್ಷವನ್ನು ಸಂಘಟಿಸುವುದು ಮತ್ತೊಂದೆಡೆ ಮುಖಂಡರನ್ನು ಸೆಳೆಯುವ ನಿರಂತರ ಪ್ರಯತ್ನ ನಡೆದಿತ್ತು.
ಜೆಡಿಎಸ್ ಮತ್ತು ಬಿಜೆಪಿ ಶಾಸಕರನ್ನು ಮತ್ತು ಮುಖಂಡರನ್ನು ಸೆಳೆಯುವ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಪೈಪೋಟಿಯೇ ಉಂಟಾಗಿತ್ತು. ತಾವು ಕರೆತರುವ ವ್ಯಕ್ತಿಗಳು ವಿಧಾನಸಭೆಗೆ ಆಯ್ಕೆಗೊಂಡರೆ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ತಮ್ಮೊಂದಿಗೆ ಇರುತ್ತಾರೆ ಎಂಬ ದೂರದೃಷ್ಟಿಯಿಂದ ಅನ್ಯ ಪಕ್ಷದವರನ್ನು ಸೆಳೆಯುವ ಹಠಕ್ಕೆ ಬಿದ್ದಿದ್ದರು. ಅದರಲ್ಲೂ ಜೆಡಿಎಸ್ನ ಜಿ.ಟಿ.ದೇವೇಗೌಡ, ಗುಬ್ಬಿ ಶ್ರೀನಿವಾಸ್, ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡ ಸೇರಿದಂತೆ 11 ಶಾಸಕರು ಹಾಗೂ ಮುಖಂಡರುಗಳು ಕಾಂಗ್ರೆಸ್ ಸೇರುವ ಮಾತುಕತೆಗಳೂ ನಡೆದಿತ್ತು. ಅದರಲ್ಲಿ ಕೆಲವರು ಜೆಡಿಎಸ್ ತೊರೆಯುವುದಾಗಿಯೂ ಹೇಳಿಕೆ ನೀಡಿದ್ದರು, ಆದರೆ, ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಮುಂದಾಗಿದ್ದವರು ಬಹಿರಂಗವಾಗಿ ಹೇಳಿಕೆಯನ್ನೂ ನೀಡಿರಲಿಲ್ಲ,ತೋರಿಸಿಕೊಂಡಿಯೂ ಇರಲಿಲ್ಲ.
ಚುನಾವಣಾ ವೇಳೆಗೆ ತಾವು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಾಗಿ ಸಚಿವರು, ಶಾಸಕರು, ಸಿದ್ದರಾಮಯ್ಯ ಮತ್ತು ಶಿವಕುಮಾರ್ಗೆ ಭರವಸೆಯನ್ನೂ ನೀಡಿದ್ದರು. ಅಷ್ಟೇ ಅಲ್ಲದೆ, ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ಮುಖಂಡರು ಚುನಾವಣೆಗೆ ತಯಾರಿ ನಡೆಸದಂತೆ ಮತ್ತು ಯಾರಿಗೂ ಟಿಕೆಟ್ನ ಭರವಸೆ ನೀಡಬಾರದೆಂದು ಸೂಚಿಸಿದ್ದರು. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ನಂತರ ಪಕ್ಷ ವಲಸೆಗೆ ಮುಂದಾಗಿದ್ದವರು ಮತ್ತೆ ಮರು ಚಿಂತನೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರಂತೂ ತಾವು ಈಗಿರುವ ಪಕ್ಷದಲ್ಲೇ ಉಳಿದುಕೊಳ್ಳುವ ತೀರ್ಮಾನಕ್ಕೇ ಬಂದಿದ್ದಾರೆ. ಈ ಫಲಿತಾಂಶದಿಂದ ರಾಜ್ಯ ಕಾಂಗ್ರೆಸ್ಗೆ ಸ್ವಲ್ಪ ಹಿನ್ನಡೆಯಾದಂತೆ ಕಂಡುಬರುತ್ತಿದೆ, ನಾಯಕರಲ್ಲೂ ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಬಿಜೆಪಿ ಚುನಾವಣಾ ವಿಜಯೋತ್ಸವ ಜೆಡಿಎಸ್ಗೆ ಸ್ವಲ್ಪ ಉಸಿರು ಬಂದಂತಾಗಿದೆ. ಪಕ್ಷ ತೊರೆಯುತ್ತಿದ್ದವರಲ್ಲಿ ಕೆಲವರು ತಮ್ಮ ನಿರ್ಧಾರ ಬದಲಿಸಿ, ಪಕ್ಷದಲ್ಲಿಯೇ ಉಳಿಯುವರೆಂಬ ಭಾವನೆ ಜೆಡಿಎಸ್ ಪಕ್ಷದ ನಾಯಕರಲ್ಲಿ ಮೂಡಿದೆ.
