ಯುದ್ಧ ಬೇಡ..ಬುದ್ಧ ಬೇಕು ಎಂದ ಕನ್ನಡಪರ ಹೋರಾಟಗಾರರು!

ರಾಮನಗರ: ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಯುದ್ಧ ಬೇಡ , ಬುದ್ಧ ಬೇಕು ಎಂಬ ಘೋಷಣೆಯೊಂದಿಗೆ ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ದಬ್ಬಾಳಿಕೆ ಖಂಡಿಸಿ, ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು. ಭಾರತ ಎರಡು ರಾಷ್ಟ್ರಗಳ ನಡುವೆ ಶಾಂತಿ ನೆಲಸಲು ರಾಯಭಾರಿ ಆಗಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶಗೌಡ ಮಾತನಾಡಿ, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಪ್ರಪಂಚದಾದ್ಯಂತ ಭಾರತೀಯರು ವಲಸೆ ಹೋಗಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ಮಾಡುತ್ತಿರುವಾಗ ನಾವು ಸುಮ್ಮನೆ ಕುಳಿತ್ತಿದ್ದೆವು. ಅಲ್ಲಿ ಕನ್ನಡಿಗರು ಸೇರಿ 30 ಸಾವಿರಕ್ಕೂ ಹೆಚ್ಚು ಜನ ಭಾರತೀಯರು ಇದ್ದಾರೆ. ಜೊತೆಗೆ ಚನ್ನಪಟ್ಟಣ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಯುವತಿ ಒಬ್ಬಳು, ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವುದು ಗೊತ್ತಾಯಿತು. ಬಡವರು, ಮಹಿಳೆಯರು, ವೃದ್ಧರು, ರೋಗಿಗಳ ಮೇಲೆ ರಷ್ಯಾ ಯುದ್ಧ ಮಾಡುತ್ತಿದೆ ಎಂದರು.
ಯುದ್ಧದಿಂದಾಗಿ ಪ್ರತಿಯೊಬ್ಬರ ಮನಗಳನ್ನು ಕಲಕುವಂತಹ ದೃಶ್ಯಗಳು ನೋಡುತ್ತಿದ್ದೇವೆ. ಮಕ್ಕಳು ತನ್ನ ಯೋಧನನ್ನು ಅಲ್ಲಿಗೆ ಹೋಗಬಾರದು ಅಂತಹ ಹೇಳಿ ತಡೆಯುವಂತಹ ಪರಿಸ್ಥಿತಿಗಳು ನೋಡುತ್ತಾ ಇದ್ದೇವೆ. ವಿಶ್ವಸಂಸ್ಥೆ ಕೈ ಕಟ್ಟಿಕೊಂಡು ಕುಳಿತಿದೆ. ಪಾಕಿಸ್ತಾನ ಮತ್ತು ಚೀನಾಗಳು ನಮ್ಮ ದೇಶದ ಮೇಲೆ ಯುದ್ದ ಸಾರಿದಾಗ , ಭಾರತ ದೇಶಕ್ಕೆ ರಷ್ಯಾ ಬೆಂಬಲಿಸಿತ್ತು ಎಂಬ ಕಾರಣಕ್ಕೆ, ಭಾರತ ದೇಶ ಕೂಡ ಸುಮ್ಮನೆ ಕುಳಿತಿದೆ. ತನ್ನ ದೇಶದ ಶಸ್ತ್ರಸ್ತ್ರಾಗಳು ಎಷ್ಟು ಜನರಿಗೆ ಮಾರಾಟ ಮಾಡಬಹುದು ಎಂಬುದು ಅಮೆರಿಕಾ ಲೆಕ್ಕಚಾರ ಹಾಕುತ್ತಿದೆ. ಆದರೆ, ರೌಡಿ ರಾಷ್ಟ್ರ ರಷ್ಯಾ, ಏಕಾಏಕಿ ರೈಲ್ವೆ ಹಳಿಗಳನ್ನು, ವಿದ್ಯುತ್ ಸ್ಥಾವರಗಳನ್ನು, ಅಣು ರಿಯಾಕ್ಟ್ ಕೇಂದ್ರಗಳನ್ನು ಧ್ವಂಸ ಮಾಡುತ್ತಾ ಸಾಗುತ್ತಾ ಇದೆ. ಒಂದೊಮ್ಮೆ ಇದು ವಿಕೋಪಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ಉಕ್ರೇನ್‌ಗೆ ಆಗುವ ಗತಿ, ಬೇರೆ ದೇಶಗಳ ಜೊತೆಗೂ ಯುದ್ಧ ಆಗಬಹುದು. ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಿ, ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಕಿವಿಮಾತು ಹೇಳಿ ಕದನವನ್ನು ನಿಲ್ಲಿಸುವಂತಹ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಯೋಗೀಶ್‌ಗೌಡ ಮಾತನಾಡಿ, ಚೀನಾ ವಿರುದ್ಧ ಯುದ್ಧಕ್ಕೆ ರಷ್ಯಾ ದೇಶ ಬೆಂಬಲಿಸಿದ ಪರಿಣಾಮ, ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಅನ್ಯಾಯ ನಡೆಯುತ್ತಿದ್ದ ವಿರುದ್ಧ ಉಕ್ರೇನ್‌ಗೆ ಬೆಂಬಲಿಸುವ ಕುರಿತು ಮನಬಿಚ್ಚಿ ಹೇಳುವುದಕ್ಕೆ ಆಗುತ್ತಿಲ್ಲ. ಹಾಗಾಗಿ ನಾವು ಮಧ್ಯ ಪರಿಸ್ಥಿತಿಯಲ್ಲಿ ಇವೆ. ಉಕ್ರೇನ್ ರಾಷ್ಟ್ರದಲ್ಲಿ ಕಡಿಮೆ ಖರ್ಚಿನಲ್ಲಿ ಎಂಬಿಬಿಎಸ್ ವ್ಯಾಸಂಗ ಸಿಗುತ್ತಿದೆ. ಪುಟ್ಟ ರಾಷ್ಟ್ರದ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವುದು ಖಂಡನೀಯವೆಂದರು.
ಯುದ್ಧದಿಂದಾಗಿ ಸಾವಿರಾರು ಜನ ಸಾಯುತ್ತಿದ್ದಾರೆ. ಕುಟುಂಬಗಳನ್ನು ಕಳೆದುಕೊಂಡು ಮಕ್ಕಳು ಅನಾಥರಾಗುತ್ತಿದ್ದಾರೆ. ಆಹಾರ ಇಲ್ಲದೆ, ಗರಿಕೆ ತಿನ್ನುತ್ತಿರುವ ದೃಶ್ಯಗಳು ಮನಕುಲಕುವಂತಿವೆ. ಒಣ ಪ್ರತಿಷ್ಠೆಗೋಸ್ಕರ ಯುದ್ಧ ಮಾಡುವುದು ಬೇಡ. ಉಕ್ರೇನ್ ದೇಶಕ್ಕೆ ಧ್ವನಿಯಾಗಬೇಕು. ವಿಶ್ವಸಂಸ್ಥೆ ಮಧ್ಯೆ ಪ್ರವೇಶಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುವ ಯುದ್ಧ ನಿಲ್ಲಿಸಬೇಕೆಂದು ಅವರು ಮನವಿ ಮಾಡಿದರು.
ಡಿಎಸ್‌ಎಸ್ ಸಂಚಾಲಕ ವೆಂಕಟೇಶ ಮಾತನಾಡಿ, ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ತೀರಾ ಬಡ ಕುಟುಂಬಗಳು ಸಾಯುತ್ತಿದ್ದಾರೆ. ಮಾನವೀಯತೆ ಯಿಂದಾಗಿ ವಿಶ್ವಸಂಸ್ಥೆಗೆ ಗಮನಸೆಳೆಯುವ ಕೆಲಸ ಮಾಡುತ್ತಿದೆ. ಬೇರೆ ದೇಶಗಳ ಕುರಿತು ನಾವೆಲ್ಲರೂ ಯೋಚನೆ ಮಾಡಬೇಕಾಗಿದೆ. ಎಷ್ಟು ಜನ ಬೀದಿ ಪಾಲಾಗಿದ್ದಾರೆ. ವಿಶ್ವಸಂಸ್ಥೆಯವರು ಮಧ್ಯೆ ಪ್ರವೇಶಿಸಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಎಲೇಕೇರಿ ಮಂಜುನಾಥ, ವೇದಿಕೆಯ ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ವಿದ್ಯಾರ್ಥಿಗಳ ಘಟಕದ ಅಧ್ಯಕ್ಷ ದಿಲೀಪ್‌ಗೌಡ ಮತ್ತೀಕೇರೆ, ಆಟೋ ಘಟಕದ ಅಧ್ಯಕ್ಷ ವೆಂಕಟೇಶ, ವೇದಿಕೆಯ ಪದಾಧಿಕಾರಿಗಳಾದ ಚಿಕ್ಕನಹಳ್ಳಿ ಸುರೇಶಬಾಬು, ರಘು, ವೆಂಕಟೇಶ, ಆಟೋ ಶ್ರೀನಿವಾಸ, ಶಿವ, ಗೊಬ್ಬಳ್ಳಿ , ಮನು, ಪ್ರಸನ್ನ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
