ವೈದ್ಯಳಾಗುವ ಕನಸ್ಸು ಕಮರಿದೆ: ಕಣ್ಣೀರಿಟ್ಟ ಪ್ರಿಯಾ ಪಾಟೀಲ್!

ಕಲಬುರಗಿ: ಪೋಷಕರ ಆಸೆಯಂತೆ ವೈದ್ಯಳಾಗುವ ಕನಸ್ಸು ಕಂಡಿದ್ದೆ. ಆದ್ರೆ ಇನ್ಮುಂದೆ ಉಕ್ರೇನ್ ಹೋಗಿ ಶಿಕ್ಷಣ ಮುಂದುವರಿಸುವ ವಾತಾವರಣ ಇಲ್ಲ. ನಮ್ಮ ಶಿಕ್ಷಣದ ಭವಿಷ್ಯ ಹಾಳಾಗುತ್ತದೆ ಅಂತ ಉಕ್ರೇನ್ ನಿಂದ ಆಗಮಿಸಿರೋ ಪ್ರಿಯಾ ಪಾಟೀಲ್ ಆತಂಕ ವ್ಯಕ್ತ ಪಡಿಸಿದ್ದಾರೆ.
ಉಕ್ರೇನ್ ಯುದ್ದ ಭೂಮಿಯಿಂದ ಸೇಫ್ ಆಗಿ ಬಂದಿರುವ ಕಾರಣ ಹಾಗೂ ಮಹಿಳಾ ದಿನಾಚರಣೆ ಪ್ರಯುಕ್ತ ನಿನ್ನೆಯಷ್ಟೆ ಕಲಬುರಗಿಗೆ ಆಗಮಿಸಿದ್ದ ಪ್ರಿಯಾ ಪಾಟೀಲ್ಗೆ ಜಿಲ್ಲಾ ವೀರಶೈವ ಸಮಾಜ, ಹಿಂದೂ ಜಾಗೃತಿ ಸೇನೆ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ವೇಳೆ ಮಾಧ್ಯಮದ ಮುಂದೆ ತನ್ನ ಅಳಲು ತೋಡಿಕೊಂಡ ಪ್ರಿಯಾ, ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕಳವಳ ವ್ಯಕ್ತ ಪಡಿಸಿದರು. ಇನ್ಮುಂದೆ ಉಕ್ರೇನ್ಗೆ ಹೋಗಿ ಶಿಕ್ಷಣ ಮುಂದುವರಿಸುವ ವಾತಾವರಣ ಇಲ್ಲ, ಹಾಗಾಗಿ ಭಾರತ ಸರ್ಕಾರ ನಮಗೆ ಇಲ್ಲಿಯೇ ಎಂಬಿಬಿಎಸ್ ಕಂಟಿನ್ಯೂ ಮಾಡಲು ಅವಕಾಶ ಮಾಡಿಕೊಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಇನ್ನು ಉಕ್ರೇನ್ನ ಖಾರ್ಕಿವ್ ನಗರದಲ್ಲಿ MBBS 4 ನೇ ಸೆಮಿಸ್ಟರ್ ಓದುತ್ತಿದ್ದ ಪ್ರಿಯಾ ಪಾಟೀಲ್ ಯುದ್ದ ಆರಂಭವಾದ ನಂತರ ಎರಡು ದಿನ ಮೆಟ್ರೋ ಸ್ಟೇಷನ್ ಮತ್ತು ಎಂಟು ದಿನ ಬಂಕರ್ನಲ್ಲಿ ಕಾಲ ಕಳೆದಿದ್ದರು. ಬಳಿಕ ಖಾರ್ಕಿವ್ನಿಂದ ಪೊಲ್ಯಾಂಡ್ ಗಡಿವರೆಗೆ ಕಾಲ್ನೆಡಿಗೆಯಲ್ಲಿ ಆಗಮಿಸಿದ್ದ ಪ್ರಿಯಾ ಪಾಟೀಲ್, ಪೊಲ್ಯಾಂಡ್ ಗಡಿಯಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಸಹಾಯದಿಂದ ಭಾರತಕ್ಕೆ ಆಗಮಿಸಿದ್ದಾರೆ. ಯುದ್ಧವನ್ನು ಕಣ್ಣಾರೆ ಕಂಡು, ತಾವು ವಾಸಿಸುವ ಸ್ಥಳದಿಂದ ಕೂಗಳತೆ ದೂರದಲ್ಲೆ ಬಾಂಬ್ ಸ್ಪೋಟಗೊಂಡರು ಎದೆಗುಂದದೆ ಧೈರ್ಯವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಈ ಹೆಣ್ಣು ಮಗಳ ಧೈರ್ಯ ಮೆಚ್ಚಲೇಬೇಕು ಎಂದು ಸಾರ್ವಜನಿಕರು ಕೊಂಡಾಡಿದರು.
