ರಸ್ತೆ ಅಪಘಾತ: ಗಾಯಾಳುಗಳಿಗೆ ತಮ್ಮ ಕಾರು ನೀಡಿ ಮಾನವೀಯತೆ ಮೆರೆದ ಎಸ್.ಪಿ!

ದೊಡ್ಡಬಳ್ಳಾಪುರ: ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಾವು ಪ್ರಯಾಣಿಸುತ್ತಿದ್ದ ಕಾರನ್ನೇ ನೀಡಿ, ತಾವು ಮತ್ತೊಂದು ಕಾರಲ್ಲಿ ಪ್ರಯಾಣಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ತೂಬಗೆರೆ ಹೋಬಳಿಯ ಬಾಲೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಮತ್ತು ಅವರ ಪತ್ನಿ ರಾಧ ಎನ್ನುವವರು ಸೋಮವಾರ ದೊಡ್ಡಬಳ್ಳಾಪುರದ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ, ಗುಂಗೀರಲಹಳ್ಳಿ ಸಮೀಪ ದ್ವಿಚಕ್ರ ವಾಹನಕ್ಕೆ ಸೆರಗು ತಗುಲಿದ ಪರಿಣಾಮ ಅಪಘಾತಕ್ಕೆ ಒಳಗಾಗಿ ರಸ್ತೆಯಲ್ಲಿ ಬಿದ್ದಿದ್ದು, ಇದೇ ದಾರಿಯಲ್ಲಿ ಕಾರ್ಯ ನಿಮಿತ್ತ ಇತರೆ ಅಧಿಕಾರಿಗಳೊಂದಿಗೆ ಬಂದ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಇತರೆ ಸಿಬ್ಬಂದಿಗಳು ಅಪಘಾತಕ್ಕೀಡಾದ ದಂಪತಿಯನ್ನು ಉಪಚರಿಸಿದ್ದಾರೆ.
ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ರಾಧ ಅವರನ್ನು ತಾವು ಪ್ರಯಾಣಿಸುತ್ತಿದ್ದ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ ಎಸ್ಪಿ ಮಿಥುನ್ ಕುಮಾರ್ ಅವರು, ಗಾಯಾಳುವಿನ ಜೊತೆ ಬೆಂಗಾವಲಿಗಿದ್ದ ಸಿಬ್ಬಂದಿಗಳನ್ನು ಕಳಿಸಿ ತಾವು ಇತರೆ ಅಧಿಕಾರಿಗಳ ಕಾರಿನಲ್ಲಿ ಪ್ರಯಾಣ ಮುಂದುವರೆಸಿದ್ದಾರೆ. ಅಲ್ಲದೆ ಆಸ್ಪತ್ರೆಗೆ ಕರೆತರುತ್ತಿರುವ ಕುರಿತು ದೊಡ್ಡಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಹಾಗೂ ನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಗೋವಿಂದ್ ಆಸ್ಪತ್ರೆಗೆ ತೆರಳಿ ರಾಧ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ರಾಧ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
