ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿದ ಉರಗ ತಜ್ಞ ನರೇಶ್

ಚಿಕ್ಕಮಗಳೂರು: ಚಿನ್ನಿಮಕ್ಕಿ ಗ್ರಾಮದ ತಾರೇಶ್ ಎಂಬವರ ಮನೆಯ ಪಕ್ಕ ಕಾಫಿ ತೋಟದಲ್ಲಿ ಬರೋಬ್ಬರಿ 14 ಅಡಿ ಉದ್ದದ ಸುಮಾರು 25 ಕೆಜಿ ತೂಕದ ಹೆಬ್ಬಾವು ಸಂಚಾರ ಮಾಡಿಕೊಂಡಿತ್ತು. ಇದನ್ನು ತಾರೇಶ್ ಕುಟುಂಬದ ಸದಸ್ಯರು ವೀಕ್ಷಣೆ ಸಹ ಮಾಡಿದ್ದರು. ನಂತರ ಈ ಹೆಬ್ಬಾವನ್ನು ಎಷ್ಟೇ ಹುಡುಕಿದರೂ ಸಿಕ್ಕಿಲ್ಲ. ಸ್ವಲ್ಪ ಸಮಯದ ನಂತರ ಈ ಹೆಬ್ಬಾವು ಮರದ ಮೇಲೆ ಮಲಗಿ ಬೇಟೆಗಾಗಿ ಹೊಂಚು ಹಾಕುತ್ತಿತ್ತು. ಇದನ್ನು ನೋಡಿದಂತಹ ಮನೆಯ ಮಾಲೀಕ ತಾರೇಶ್ ಕೂಡಲೇ ಚಿಕ್ಕಮಗಳೂರಿನ ಉರಗ ತಜ್ಞ ನರೇಶ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.ಕೂಡಲೇ ಸ್ಥಳಕ್ಕಾಗಮಿಸಿದ ಉರಗ ತಜ್ಞ ನರೇಶ್ ಹೆಬ್ಬಾವು ಹಿಡಿಯಲು ಹರಸಾಹಸಪಟ್ಟಿದ್ದಾರೆ.
ಈ ಹೆಬ್ಬಾವು ಸೆರೆ ಹಿಡಿಯುವ ವೇಳೆ ಆತಂಕದ ವಾತಾವರಣ ಕೂಡ ಕೆಲ ಸಮಯ ನಿರ್ಮಾಣವಾಗಿತ್ತು. ಮರದ ಮೇಲಿಂದ ಬಿದ್ದಂತಹ ಹೆಬ್ಬಾವು ನಂತರ ಕಲ್ಲಿನ ಪೊಟರೆಯಲ್ಲಿ ಅವಿತು ಮಲಗಿತ್ತು. ಕೂಡಲೇ ಇದನ್ನು ಪತ್ತೆ ಹಚ್ಚಿದ ನರೇಶ್ ಅವರ ಕೈಯಿಂದ ಹೆಬ್ಬಾವಿನ ಕುತ್ತಿಗೆ ಹಿಡಿದಾಗ ಅವರ ಕೈ ಸುತ್ತಿಕೊಳ್ಳಲು ಈ ಹೆಬ್ಬಾವು ಪ್ರಾರಂಭ ಮಾಡಿತ್ತು. ಇದನ್ನು ಗಮನಿಸಿದ ನರೇಶ್ ಯಾರಾದರೂ ಸಹಾಯಕ್ಕೆ ಬನ್ನಿ ಎಂದು ಅಂಗಲಾಚಿದ್ದು, ಸ್ಥಳೀಯರು ಹೆಬ್ಬಾವನ್ನು ಅವರ ಕೈಯಿಂದ ಬಿಡಿಸುವ ಪ್ರಯತ್ನ ಮಾಡಿ ನಂತರ ಅವರ ಕೈಯಿಂದ ಸಂಪೂರ್ಣವಾಗಿ ಹೆಬ್ಬಾವನ್ನು ಬಿಡಿಸಿದ್ದಾರೆ. ಸೆರೆ ಹಿಡಿದ ಹೆಬ್ಬಾವಿನ ಗಾತ್ರ ನೋಡಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದು, ಕೆಲವರು ಇದರ ಜೊತೆ ಫೋಟೋ ಸಹ ತೆಗೆದು ಕೊಂಡಿದ್ದಾರೆ. ನಂತರ ಸೆರೆ ಹಿಡಿದ ಹೆಬ್ಬಾವನ್ನು ಸುರಕ್ಷಿತವಾಗಿ ನಗರದ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
