ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾದ ನಟ ಸೋನು ಸೂದ್

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಈಗಾಗಲೇ ಸಾಕಷ್ಟು ಸಮಾಜ ಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೊರೊನಾ ಸಂತ್ರಸ್ತರಿಗೆ ಸಹಾಯ ಮಾಡಿದ್ದರು. ಇದೀಗ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಈ ಸಂಘರ್ಷದ ನಡುವೆ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಈ ವೇಳೆ ನಟ ಸೋನು ಸೂದ್ ಅನೇಕ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದ್ದಾರೆ.
ಹಲವಾರು ವಿದ್ಯಾರ್ಥಿಗಳು ಸೋನು ಸೂದ್ ಚಾರಿಟಿ ಸಂಸ್ಥೆಯಿಂದ ಸಹಾಯ ಪಡೆದಿರುವ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸುರಕ್ಷಿತವಾಗಿ ಮನೆಗೆ ತೆರಳಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೋವಿಡ್-19 ಲಾಕ್ಡೌನ್ ವೇಳೆ ವಲಸಿಗರಿಗೆ ತಮ್ಮ ಮನೆಗಳಿಗೆ ತೆರಳಲು ಸಹಾಯ ಮಾಡುವ ಮೂಲಕ ಸೋನುಸೂದ್ ಪ್ರಶಂಸೆ ಪಡೆದಿದ್ದರು. ಇದೀಗ ಯುದ್ಧ ಪೀಡಿತ ಉಕ್ರೇನ್ನ ಖಾರ್ಕಿವ್ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳು ತಮ್ಮ ಊರಿಗೆ ತಲುಪಲು ಸಹಾಯ ಮಾಡುತ್ತಿರುವ ಸೋನು ಸೂದ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
