ಹೆದ್ದಾರಿ ಪಕ್ಕ ಜಲಶಕ್ತಿ ಯೋಜನೆಗೆ ಬೆಳಗಾವಿಯಲ್ಲಿ ಚಾಲನೆ, ಇಡಿ ರಾಜ್ಯಕ್ಕೆ ವಿಸ್ತರಣೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಹೆದ್ದಾರಿ ಮತ್ತು ಗ್ರಾಮೀಣ ಕೊಳುವೆ ನೀರಿನ ಯೋಜನೆ ಇದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಒಟ್ಟು 3972 ಕೋಟಿ ರೂಪಾಯಿ ವೆಚ್ಚದ 238 ಕಿ.ಮೀ ಉದ್ದದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಹೊಸ ಆಯಾಮ ಒದಗಿಸಲಾಗುವುದು ಎಂದು ತಿಳಿಸಿದರು. ಬೆಳಗಾವಿ ಸೇರಿದಂತೆ ರಾಜ್ಯದ ಇತರ ಕಡೆಯ ರಿಂಗ್ ರಸ್ತೆಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಿಎಂ ಬೊಮ್ಮಾಯಿ ಮನವಿ ಮಾಡಿದರು.
ಮಹಾರಾಷ್ಟ್ರದ ಕಾರ್ಮಿಕ ಸ್ಥಳಗಳಾದ ಪಂಢರಾಪುರ, ಶಿರಡಿ ಮತ್ತಿತರ ಧಾರ್ಮಿಕ ಸ್ಥಳಗಳನ್ನು ಕರ್ನಾಟಕ ರಾಜ್ಯದ ಧಾರ್ಮಿಕ ಸ್ಥಳಗಳ ಜತೆ ಜೋಡಿಸಲು ವಿನೂತನ ಯೋಜನೆಯನ್ನು ನಿತಿನ್ ಗಡ್ಕರಿ ಅವರು ರೂಪಿಸಿದ್ದಾರೆ ಎಂದರು.
ಜಿಎಸ್ ಟಿ ವಿನಾಯಿತಿ: ಸಿಎಂ ಭರವಸೆ
ರಾಜ್ಯದಲ್ಲಿರುವ ಹೆದ್ದಾರಿಗಳು ಮತ್ತು ರಿಂಗ್ ರಸ್ತೆಯ ಅಭಿವೃದ್ಧಿಗಾಗಿ ರಾಜ್ಯ ಸರಕಾರದ ವತಿಯಿಂದ ಜಿ.ಎಸ್.ಟಿ. ವಿನಾಯಿತಿ, ಭೂಸ್ವಾಧೀನ ಮತ್ತಿತರ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ. ರಸ್ತೆಗಳು ಅಭಿವೃದ್ಧಿ ಮಾತ್ರವಲ್ಲ ದೇಶದ ಭಾವೈಕ್ಯತೆಗೆ ಬೆಸುಗೆಯಾಗುವೆ ಎಂದು ಅವರು ಅಭಿಪ್ರಾಯಪಟ್ಟರು.
ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮೂಲಕ ಬೆಳಗಾವಿಯಲ್ಲಿ ರಸ್ತೆ ಸಂಪರ್ಕ ಕ್ರಾಂತಿ ಆಗಲಿದೆ. ಸಚಿವ ನಿತಿನ ಗಡ್ಕರಿ ಅವರು ಮಹಾರಾಷ್ಟ್ರದ ಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಒಂದೇ ಯೋಜನೆಯಡಿ 58 ಕ್ಕೂ ಅಧಿಕ ಮೇಲ್ಸೆತುವೆ ನಿರ್ಮಿಸಿ ಇಡೀ ದೇಶದ ಗಮನ ಸೆಳೆದಿದ್ದರು ಎಂದು ತಿಳಿಸಿದರು.
ಐದು ಯೋಜನೆಗಳಿಗೆ ಶಂಕುಸ್ಥಾಪನೆ
ಇದೇ ವೇಳೆ, ಬೆಳಗಾವಿ-ಸಂಕೇಶ್ವರ ಬೈಪಾಸ್, ಸಂಕೇಶ್ವರ ಬೈಪಾಸ್-ಮಹಾರಾಷ್ಟ್ರ ಗಡಿಯವರೆಗೆ ಷಟ್ಪಥ ನಿರ್ಮಾಣ ಕಾಮಗಾರಿ; ಚೋರ್ಲಾ-ಜಾಂಬೋಟಿ-ಬೆಳಗಾವಿ ನಡುವಿನ ದ್ವಿಪಥ ಕಾಮಗಾರಿಗಳು; ಇದೇ ರೀತಿ ವಿಜಯಪುರ-ಮುರಗುಂಡಿ(ಎನ್.ಎಚ್.548ಬಿ) ಹಾಗೂ ಸಿದ್ದಾಪುರ-ವಿಜಯಪುರ(ಎನ್.ಎಚ್.561ಎ) ಕಾಮಗಾರಿಗಳಿಗೆ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
