
ನವದೆಹಲಿ: ಉಕ್ರೇನ್ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕಳೆದ ರಾತ್ರಿ ಎರಡು ಗಂಟೆಗಳ ಕಾಲ ಉನ್ನತ ಮಟ್ಟದ ಸಭೆ ನಡೆದಿದೆ. ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದು ಮತ್ತು ಅವರನ್ನು ಸ್ಥಳಾಂತರಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ ಎಂದು ಸಭೆಯಲ್ಲಿ ಪ್ರಧಾನಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಪ್ರಜೆಗಳನ್ನು ಉಕ್ರೇನ್ ನಿಂದ ಸ್ಥಳಾಂತರ ಮಾಡುವ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಉಕ್ರೇನ್ ನರೆಯ ರಾಷ್ಟ್ರಗಳೊಂದಿಗಿನ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಸೆಇರದಂತೆ ಇತರರು ಭಾಗವಹಿಸಿದ್ದರು.
ಸ್ಥಳಾಂತರ ಕಾರ್ಯಾಚರಣೆಗೆ ಮೋದಿ ಪಡೆ
ಈ ನಡುವೆ, ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಗೆ ನೆರವಾಗುವ ಉದ್ದೇಶದಿಂದ ಕೇಂದ್ರದ ಕೆಲವು ಸಚಿವರು ಉಕ್ರೇನ್ ನ ನೆರೆ ರಾಷ್ಟ್ರಗಳಿಗೆ ತರಳಲಿದ್ದಾರೆ.
ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ವಿ.ಕೆ.ಸಿಂಗ್ ಅವರು ವಿದ್ಯಾರ್ಥಿಗಳಿಗೆ ನೆರವಾಗಲು ಉಕ್ರೇನ್ ನ ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ ಎಂದು ಸರ್ಕಾರಿ ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ನೆರೆ ದೇಶಗಳಾದ ಪೋಲೆಂಡ್, ರುಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮೂಲಕ ಸ್ವದೇಶಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಆಪರೇಷನ್ ಗಂಗಾ ಹೆಸರಿನ ಕಾರ್ಯಾಚರಣೆ ಮೂಲಕ ಭಾರತೀಯರ ಸ್ಥಳಾಂತರ ನಡೆಯುತ್ತಿದೆ. ಈ ದೇಶಗಳ ಗಡಿಗಳಲ್ಲಿ ಉಕ್ರೇನ್ ನಿಂದ ಬರುವ ಭಾರತೀಯರಿಗೆ ನೆರವಾಗಲೆಂದೇ ಕೇಂದ್ರಗಳನ್ನು ತೆರೆಯಲಾಗಿದ್ದು ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.
