ವಿದೇಶಿ ನೆಲದಲ್ಲಿ ಬೇಷ್ ಎನಿಸಿಕೊಂಡ ‘ಪೆದ್ರೋ’ ಸಿನಿಮಾ ಕನ್ನಡ ನೆಲದಲ್ಲಿ ಕಡೆಗಣನೆ

ವಿದೇಶಿ ನೆಲದಲ್ಲಿ ಶಹಭಾಷ್ ಎನಿಸಿಕೊಂಡ ಕನ್ನಡದ ಪೆದ್ರೋ ಚಿತ್ರವನ್ನ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಡೆಗಣಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ನಟೇಶ್ ಹೆಗಡೆ ನಿರ್ದೇಶನದ, ಗೋಪಾಲ್ ಹೆಗಡೆ, ರಾಮಕೃಷ್ಣ ಭಟ್ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಪೆದ್ರೋ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ನಿರ್ಮಾಪಕ ರಿಷಬ್ ಶೆಟ್ಟಿ ಬೆಂಗಳೂರು ಸಿನಿಮೋತ್ಸವಕ್ಕೆ ಪೆದ್ರೋ ಸಿನಿಮಾ ಕಳಿಸಿದ್ದೆವು. ಆದರೆ ಒಳ ರಾಜಕೀಯದಿಂದಾಗಿ ನಮ್ಮ ಚಿತ್ರವನ್ನ ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಲ್ಲ. ಬೂಸಾನ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಸೇರಿದಂತೆ ವಿದೇಶಿ ನೆಲದಲ್ಲಿ ಹಲವೆಡೆ ಪ್ರದರ್ಶನ ಕಂಡು ಪ್ರಶಸ್ತಿ ಪಡೆದ ಕನ್ನಡ ಚಿತ್ರವನ್ನ ಕನ್ನಡ ನೆಲದಲ್ಲೇ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಟೇಶ್ ಅವರ ಕುರ್ಲಿ ಕಿರುಚಿತ್ರ ನೋಡಿ ಬೆರಗಾಗಿದ್ದೆ. ಈಗ ಹೊಸ ಸಿನಿಮಾ ಭಾಷೆಯನ್ನು ಪೆದ್ರೋ ಚಿತ್ರದಲ್ಲಿ ಕಂಡೆ. ಈ ಚಿತ್ರದಲ್ಲಿ ಮೆಡಿಟೇಟಿವ್ ರಿದಂ ಇದೆ. ಇಲ್ಲಿರುವ ಸನ್ನಿವೇಶ, ಘಟನೆಗಳನ್ನು ಮೀರಿದ್ದೇನೋ ಪ್ರೇಕ್ಷಕನಿಗೆ ದಕ್ಕುತ್ತದೆ. ನಾನು ಮೆಚ್ಚಿದ ಅತ್ಯುತ್ತಮ ಮೂರು ಚಿತ್ರಗಳಲ್ಲಿ ಪೆದ್ರೋ ಕೂಡ ಒಂದು ಎಂದಿದ್ದಾರೆ.




