Russia-Ukraine : ಭಯ ಬೇಡ ಪ್ರಧಾನಿ ಮೋದಿ ಮೇಲೆ ನಂಬಿಕೆ ಇಡಿ : ಪ್ರತಾಪ್ ಸಿಂಹ

ಮೈಸೂರು ; ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ, ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭವಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾ ಅಧ್ಯಕ್ಷರೇ ಖುದ್ದಾಗಿ ಪ್ರಧಾನಿಯವರಿಗೆ ಕರೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ವಿಚಾರದಲ್ಲಿ ಯಾವ ರೀತಿ ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ಭಾರತ ಸರ್ಕಾರ ಅಥವಾ ಮೋದಿಯವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಮೋದಿ ಮತ್ತು ಪುಟಿನ್ ನಡುವೆ ಆತ್ಮೀಯ ಸ್ನೇಹ-ಸಂಬಂಧ ಇದೆ. ಅವರು ಏನು ಮಾತನಾಡಿದ್ದಾರೋ ನನಗೆ ಮಾಹಿತಿ ಇಲ್ಲ ಎಂದರು.
ಎಲ್ಲಾ ರಾಷ್ಟ್ರಗಳಿಗೂ ಸ್ವಾರ್ಥವೇ ಮುಖ್ಯ. ಉಕ್ರೇನ್ನ ಬಹುತೇಕ ಗ್ಯಾಸ್ಲೈನ್ಗಳು ರಷ್ಯಾ ಮೂಲಕ ಹಾದುಹೋಗಿವೆ. ಉಕ್ರೇನ್ನನ್ನು ಕಂಟ್ರೋಲ್ಗೆ ತೆಗೆದುಕೊಳ್ಳಲು ರಷ್ಯಾ ಮುಂದಾಗಿದೆ. ಅಮೆರಿಕಾ ಕೂಡ ಸ್ವಾರ್ಥಕ್ಕಾಗಿ ಹಿಂದೆ ಯಾವೆಲ್ಲಾ ನಿರ್ಧಾರ ತೆಗೆದುಕೊಂಡಿದೆ ಎಂಬುದು ಗೊತ್ತಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭ ಅಲ್ಲ. ಭಾರತೀಯರ ರಕ್ಷಣೆಗೆ ಕೆಂದ್ರ ಸರ್ಕಾರ ಬದ್ಧವಾಗಿದೆ. ಯುದ್ಧದಿಂದ ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿ ಆಗಿದೆ. ಭಾರತದ ಸಾಕಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಭಾರತದ ಸರ್ಕಾರ ಕೂಡ ಈ ಕುರಿತು ತುರ್ತು ಮೀಟಿಂಗ್ ಮಾಡಿದೆ ಎಂದು ತಿಳಿಸಿದರು.
ಭಾರತ ಮೊದಲ ಹಂತದಲ್ಲಿ ಒಂದು ವಿಮಾನದ ಮೂಲಕ ಭಾರತೀಯರ ರಕ್ಷಣೆಗೆ ಮುಂದಾಗಿದೆ. ರಷ್ಯಾ ಅಧ್ಯಕ್ಷರ ಜೊತೆ ಕೂಡ ಮಾತನಾಡಿದ್ದಾರೆ. ಈ ಎಲ್ಲ ವಿಚಾರ ಚರ್ಚೆ ಮಾಡಿರುತ್ತಾರೆ. ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪ್ರಧಾನಿಗಳು ಮಾತುಕತೆ ನಡೆಸುತ್ತಿದ್ದಾರೆ. ಯಾವುದೇ ಭಯ ಬೇಡ, ಮೋದಿ ಮೇಲೆ ನಂಬಿಕೆ ಇಡಿ. ಸುರಕ್ಷಿತವಾಗಿ ಭಾರತೀಯರನ್ನು ಕರೆತರುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
