ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾ.3ವರೆಗೆ ಸಚಿವ ನವಾಬ್ ಮಲ್ಲಿಕ್ ಇ.ಡಿ ವಶಕ್ಕೆ

ಮುಂಬಯಿ: ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಅವರನ್ನು ಮಾ.3ರವರೆಗೆ ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ನೀಡಲಾಗಿದೆ. ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಅವರನ್ನು ಬಂಧಿಸಲಾಗಿತ್ತು. ನಂತರ ಅವರನ್ನು ವಿಶೇಷ ನ್ಯಾಯಾಧೀಶ ರಾಹುಲ್ ರೋಕಡೆ ಅವರ ಮುಂದೆ ಹಾಜರುಪಡಿಸಲಾಯಿತು. ಅಲ್ಲಿ ತನಿಖಾ ಸಂಸ್ಥೆ 15 ದಿನಗಳ ಕಸ್ಟಡಿಗೆ ಕೋರಿತ್ತು.
ಇ.ಡಿ.ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಸ್ಫೋಟದ ಅಪರಾಧಿ ಸರ್ಕಾರ್ ಶಾಹ್ವಲಿ ಖಾನ್ ಮತ್ತು ಹಸೀನಾ ಪಾರ್ಕರ್ ಅವರ ಮುಂಚೂಣಿಯಲ್ಲಿರುವ ಮುಹಮ್ಮದ್ ಸಲೀಂ ಪಟೇಲ್ ನಡುವಿನ ಅಕ್ರಮ ಭೂ ವ್ಯವಹಾರದ ಬಗ್ಗೆ ನ್ಯಾಯಾಲಯಜಕ್ಕೆ ಮಾಹಿತಿ ನೀಡಿದರು.
ಕುರ್ಲಾದ ಗೋವಾಲಾ ಕಾಂಪೌಂಡ್ ಆಸ್ತಿ ಮೂಲತಃ ಮುನಿರಾ ಪ್ಲಂಬರ್ ಎಂಬ ಮಹಿಳೆ ಮತ್ತು ಆಕೆಯ ಸೋದರಿಗೆ ಸೇರಿತ್ತು ಎಂದು ಎಎಸ್ ಜಿ ವಿವರಿಸಿದರು. ನಕಲಿ ಪವರ್ ಆಫ್ ಅಟಾರ್ನಿ ಮೂಲಕ ಹಸೀನಾ ಪಾರ್ಕರ್ ಅವರು ಆಸ್ತಿಯನ್ನು ಸಂಪಾದಿಸಿದ್ದಾರೆ ಮತ್ತು ನಿಜವಾದ ಮಾಲೀಕರಿಗೆ ಒಂದು ರೂಪಾಯಿ ಪಾವತಿಸಿಲ್ಲ ಎಂದು ಸಿಂಗ್ ಹೇಳಿದರು.
ಆರೋಪ ನಿರಾಧಾರ: ಮಲ್ಲಿಕ್ ವಕೀಲ ದೇಸಾಯಿ
ಎಲ್ಲಾ ಆರೋಪಗಳನ್ನು ನಿರಾಕರಿಸಿದ ನವಾಬ್ ಪಲ್ಲಿಕ್ ಪರ ವಾದಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ, ಚುನಾಯಿತ ಪ್ರತಿನಿಧಿಯೊಬ್ಬರು ದೇಶ ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಗ್ರಹಿಕೆಯನ್ನು ಸೃಷ್ಟಿಸಲು ತಮ್ಮ ಕಕ್ಷಿದಾರ ನವಾಬ್ ಮಲ್ಲಿಕ್ ಅವರನ್ನು ಬಂಧಿಸಲಾಗಿದೆ ಎಂದರು. ತಮ್ಮ ಕಕ್ಷಿದಾರನ ವಿರುದ್ಧ ಯಾವುದೇ ಕ್ರಿಮಿನಲ್ ಹಿನ್ನೋಟ ಇಲ್ಲ ಎಂದು ಹೇಳಿದ ದೇಸಾಯಿ, ಪವರ್ ಆಫ್ ಅಟಾರ್ನಿ 1999ರಿಂದ, ಪಿಎಂಎಲ್ ಎ 2002ರಲ್ಲಿ ಜಾರಿಗೆ ಬಂದಿರುವುದರ ಕುರಿತು ನ್ಯಾಯಾಲಯದ ಗಮನ ಸೆಳೆದರು.
ಈ ನಡುವೆ, ಮಲ್ಲಿಕ್ ಅವರ ವೃದ್ಧಾಪ್ಯವನ್ನು ಪರಿಗಣಿಸಿ, ಪ್ರತಿವಾದಿಯು ಮನೆಯಲ್ಲಿ ಬೇಯಿಸಿದ ಆಹಾರ, ಔಷಧ ಮತ್ತು ವಿಚಾರಣೆ ಸಮಯದಲ್ಲಿ ವಕೀಲರ ಉಪಸ್ಥಿತಿಗಾಗಿ ಅರ್ಜಿಗಳನ್ನು ಸಲ್ಲಿಸಿದೆ. ಇದನ್ನು ವಿಶೇಷ ನ್ಯಾಯಾಲಯ ಗುರುವಾರ ವಿಚಾರಣೆ ನಡೆಸಲಿದೆ.
