ಶಿವಮೊಗ್ಗ ಹಿಂದೂ ಕಾರ್ಯಕರ್ತನ ಕೊಲೆಗೆ ಕಾಂಗ್ರೆಸ್ ಕಾರಣ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ಗಲಭೆ ಸೃಷ್ಟಿಸುವ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಈ ಹತ್ಯೆಗೆ ಕಾರಣವಾದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಕೊಲೆಯ ಹಿಂದಿನ ಕೈವಾಡ, ಶಕ್ತಿಗಳನ್ನು ಪೊಲೀಸ್ ಇಲಾಖೆ ಹೊರಕ್ಕೆ ತರಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಜನಮೆಚ್ಚುಗೆ ಪಡೆದಿದ್ದರೆ, ಕಾಂಗ್ರೆಸ್ ಪಕ್ಷ ಹಿಜಾಬ್ ಒಳಗೆ ಸೇರಿಕೊಂಡಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಹಿಜಾಬ್ ಸಂಘರ್ಷದ ಹಿಂದೆ ಕಾಂಗ್ರೆಸ್ ಮತ್ತು ಎಸ್ ಡಿ ಪಿಐ ಕೈವಾಡವಿದೆ. ಈಗ ಹಿಬಾಬ್ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದ್ದ ಕಾಂಗ್ರೆಸ್, ಸದನದಲ್ಲಿ ಹಿಜಾಬ್ ಚರ್ಚೆಯಲ್ಲಿ ಭಾಗವಹಿಸಿದರೆ ಕಾಂಗ್ರೆಸ್‍ಗೆ ಮೈನಸ್ ಆಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ಆ ಪಕ್ಷದ್ದಾಗಿದೆ ಎಂದು ವಿಶ್ಲೇಷಿಸಿದರು.
ಹಿಜಾಬ್ ವಿಚಾರದಲ್ಲಿ ದ್ವಂದ್ವತೆ
ಸಿಎಎ ಗಲಭೆಯಲ್ಲೂ ಕಾಂಗ್ರೆಸ್ ಪಾತ್ರವಿತ್ತು. ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡವಿತ್ತು. ರಾಜ್ಯದಲ್ಲಿ ಅವಾಂತರ ಮಾಡಲು ಗಲಭೆಗಳಿಗೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದೆ ಎಂದು ಆರೋಪಿಸಿದರು.
ನಾಲಾಯಕ್ ಪಾರ್ಟಿ
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ವಿಧಾನಸಭೆ, ವಿಧಾನ ಪರಿಷತ್ ಮೇಲೆ ನಂಬಿಕೆ ಇಲ್ಲ. ಕೇವಲ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿಗರು ಉಭಯ ಸದನಗಳಲ್ಲೂ ಧರಣಿ ಕುಳಿತಿದ್ದಾರೆ ಎಂದು ಟೀಕಿಸಿದರು. ವಿರೋಧ ಪಕ್ಷವಾಗಿ ಕಾಂಗ್ರೆಸ್ ನಾಲಾಯಕ್ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ಈಶ್ವರಪ್ಪ ರಾಜಿನಾಮೆ ಸಾಧ್ಯವಿಲ್ಲ
ಕಾಂಗ್ರೆಸ್ಸಿಗರು ನಮಗೆ ರಾಷ್ಟ್ರಭಕ್ತಿಯ ಪಾಠ ಹೇಳಬೇಕಿಲ್ಲ. ರಾಷ್ಟ್ರಧ್ವಜ ಮತ್ತು ಕೇಸರಿ ಧ್ವಜಗಳೆರಡನ್ನೂ ನಾವು ಗೌರವಿಸುತ್ತೇವೆ. ಸದನದಲ್ಲಿ ಧರಣಿ ಮಾಡಿ ನಿದ್ದೆಗೆಟ್ಟು ಈಶ್ವರಪ್ಪ ಅವರ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಿಣಿ
ಮಾರ್ಚ್ 27- 28ರಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಈ ವೇಳೆ ಅವರು ತಿಳಿಸಿದರು. ಕೇಂದ್ರದ ಯೋಚನೆ ಮತ್ತು ಯೋಜನೆಗಳಿಗೆ ಕರ್ನಾಟಕದಲ್ಲಿ ಪಕ್ಷದ ಕಾರ್ಯಕರ್ತರು ತಕ್ಷಣ ಸ್ಪಂದಿಸುತ್ತಿದ್ದಾರೆ. ಕೇಂದ್ರದ ಸೂಚನೆಯಂತೆ ಪಾರ್ಟಿ ವಿಸ್ತರಣೆಗೊಂಡಿದೆ. ಅದರ ಆಧಾರದಲ್ಲಿ ಮತಗಟ್ಟೆ ಅಧ್ಯಕ್ಷರ ಆಯ್ಕೆ, ಪೇಜ್ ಪ್ರಮುಖರ ನೇಮಕ, ವಿಸ್ತಾರಕರ ಯೋಜನೆ ಅನುಷ್ಠಾನವೂ ಸಮರ್ಪಕವಾಗಿ ನಡೆಯುತ್ತಿದೆ ಎಂದರು.
ರಾಜ್ಯ ಬಿಜೆಪಿ ಕಾರ್ಯವೈಖರಿಗೆ ಮೆಚ್ಚುಗೆ
ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ, ಸಿಎಂ ಎಂದರೆ ಕಾಮನ್‍ಮ್ಯಾನ್ ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಿದ್ದು, ಆಡಳಿತ ಯಂತ್ರಕ್ಕೆ ಚುರುಕು ನೀಡಿದೆ. ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಗಮನ ಕೊಡುತ್ತಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯನ್ನು ಜಾರಿಗೊಳಿಸಿದ್ದು, ಕಂದಾಯ ಇಲಾಖೆಯಲ್ಲಿ ಬಹಳಷ್ಟು ಪರಿವರ್ತನೆಗಳು ಆಗುತ್ತಿವೆ. 9.5 ಕೋಟಿ ಕೋವಿಡ್ ಲಸಿಕೆಗಳನ್ನು ಈಗಾಗಲೇ ನೀಡಲಾಗಿದೆ. ಅದ್ಭುತವಾದ ಕಾರ್ಯಗಳನ್ನು ನಮ್ಮ ರಾಜ್ಯ ಸರಕಾರ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
