
ನವದೆಹಲಿ: ಮೇವು ಹಗರಣದ 5 ನೇ ಮತ್ತು ಕೊನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಈ ಪ್ರಕರಣದಲ್ಲಿ ಲಾಲು ದೋಷಿ ಎಂದು ಕಳೆದ ಫೆ.15ರಂದು ನ್ಯಾಯಾಲಯ ಘೋಷಿಸಿತ್ತು.
ಲಾಲು ಅವರು ಅವಿಭಜಿತ ಬಿಹಾರದ ಸಿಎಂಯಾಗಿದ್ದಾಗ ಜಾರ್ಖಂಡ್ನ ಡೊರಾಡಾ ಖಜಾನೆಯಿಂದ 139 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಅಕ್ರಮ ಮತ್ತು ವಂಚನೆಯಿಂದ ಪಡೆದಿದ್ದಾರೆ ಎಂಬ ಆರೋಪ ಇವರ ಮೇಲಿತ್ತು.
ಮೇವು ಹಗರಣದ ಅಂತಿಮ ಪ್ರಕರಣದ ತೀರ್ಪಿನ ಆನ್ ಲೈನ್ ವಿಚಾರಣೆಗಾಗಿ ರಾಂಚಿಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ವಿಚಾರಣೆ ಆರಂಭವಾಗಲಿದೆ. ಪ್ರಕರಣದ ವಿಚಾರಣೆಗಾಗಿ ರಿಮ್ಸ್ ನ ವಿಶೇಷ ವಾರ್ಡ್ ನಲ್ಲಿ ಲ್ಯಾಪ್ ಟಾಪ್ ಮತ್ತು ಆಪರೇಟರ್ ವ್ಯವಸ್ಥೆ ಮಾಡಲಾಗಿದೆ.
ಸಿಬಿಐ ವಿಶೇಷ ಕೋರ್ಟಿನ ನ್ಯಾಯಾಧೀಶ ಎಸ್.ಕೆ.ಶಶಿ ಪ್ರಕರಣದಲ್ಲಿ 75 ಜನರನ್ನು ದೋಷಿ ಎಂದು ತೀರ್ಪು ನೀಡಿದ್ದು, ಫೆ.15ರಂದು ನ್ಯಾಯಾಲಯ ಅಂತಿಮ ತೀರ್ಮಾನ ನೀಡಿದ ನಂತರ 38 ಮಂದಿಯನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಲಾಲು ಪ್ರಸಾದ್ ಅವರ ಅನಾರೋಗ್ಯದ ಕಾರಣ ಅವರನ್ನು ರಿಮ್ಸ್ ನಲ್ಲಿರುವ ವಿಶೇಷ ಪೇಯಿಂಗ್ ವಾರ್ಡ್ ಗೆ ಸ್ಥಳಾಂತರಿಸಲಾಗಿತ್ತು. ಲಾಲು ಪ್ರಸಾದ್ ಅವರು ಈಗಾಗಲೇ ನಾಲ್ಕು ಮೇವು ಹಗರಣ ಪ್ರಕರಣಗಳಲ್ಲಿ ದೋಷಿಯಾಗಿದ್ದಾರೆ.
