ಹಿಜಾಬ್ ಹಿಂದಿನಿಂದ ಧರಿಸುತ್ತಿದ್ದಾರೆ ಆದರೆ ಕೇಸರಿ ಶಾಲು ಅಲ್ಲ: ಸಿದ್ದರಾಮಯ್ಯ

ಬೆಂಗಳೂರು : ಸಿಂಧೂರ ಆಗಲಿ-ಹಿಜಾಬ್ ಆಗಲಿ ಎರಡು ನಮ್ಮ ನಮ್ಮ ಸಂಸ್ಕೃತಿ ಮತ್ತು ನಂಬಿಕೆ. ಕುಂಕುಮ ಇಡುವುದರಿಂದ-ಹಿಜಾಬ್ ಹಾಕುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾವುದೇ ಸಂಸ್ಕೃತಿಯನ್ನು ಬಲವಂತದಿಂದ ತಡೆಯುವುದು ತಪ್ಪು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಂಧೂರ ಇಡುವುದರಿಂದ ಯಾರಿಗೂ ತೊಂದರೆ ಇಲ್ಲ. ಹಾಗೆಯೇ ಹಿಜಾಬ್ ಧರಿಸುವುದರಿಂದಲೂ ಯಾರಿಗೂ ತೊಂದರೆ ಇಲ್ಲ. ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ, ಆಚರಣೆ, ಪರಂಪರೆಗೆ ತಕ್ಕಂತೆ ನಡೆದುಕೊಳ್ಳುವುದು ಯಾರಿಗೂ ತೊಂದರೆ ಇಲ್ಲ ಎಂದರು.
ವಿರೋಧಕ್ಕೋಸ್ಕರ ಕೇಸರಿ ಶಾಲು
ಹಿಜಾಬನ್ನು ಹಿಂದಿನಿಂದಲೂ ಧರಿಸಿಕೊಂಡು ಬರುತ್ತಿದ್ದರು. ಕೇಸರಿ ಶಾಲು ಹಿಂದಿನಿಂದ ಯಾರೂ ಹಾಕುತ್ತಿರಲಿಲ್ಲ. ಹಿಜಾಬ್ ಅನ್ನು ವಿರೋಧಿಸುವುದಕ್ಕೋಸ್ಕರವೇ ಕೇಸರು ಶಾಲು ಹಾಕಿಸುವುದು ಅತ್ಯಂತ ಸಣ್ಣತನ. ಇದು ಕೇಸರಿ ಶಾಲಿಗೂ ಮಾಡುವ ಅವಮಾನ ಎಂದು ಕಿಡಿಕಾರಿದರು.
ಬಿಜೆಪಿಗೆ ಈಶ್ವರಪ್ಪ ಮಂತ್ರಿಗಿರಿಯೇ ಮುಖ್ಯ
ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಲಿಲ್ಲ. ರಾಷ್ಟ್ರ ಧ್ವಜವನ್ನೂ ಬ್ರಿಟಿಷರ ವಿರುದ್ಧ ಹಿಡಿದಿರಲಿಲ್ಲ. ಹೀಗಾಗಿ ಇವರ ಮನಸ್ಥಿತಿಯೇ ರಾಷ್ಟ್ರ ಧ್ವಜದ ವಿರುದ್ಧ ಇದೆ. ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ಅವರ ಸಚಿವ ಸ್ಥಾನ ಇವೆರಡರಲ್ಲಿ ನಿಮಗೆ ಯಾವುದು ಮುಖ್ಯ ಎನ್ನುವ ಪ್ರಶ್ನೆಯನ್ನು ನಾವು ಬಿಜೆಪಿ ಮುಂದಿಟ್ಟೆವು. ಬಿಜೆಪಿ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯ ಎಂದು ಹಠ ಹಿಡಿದು ಕುಳಿತಿದೆ.
ರಾಷ್ಟ್ರೀಯ ಲಾಂಛನಗಳಿಗೆ ಅವಮಾನ ಮಾಡುವುದು ರಾಷ್ಟ್ರದ್ರೋಹ ಮತ್ತು ಸ್ಪಷ್ಟ ಕಾನೂನಿನ ಉಲ್ಲಂಘನೆ. “ನಾವು ರಾಷ್ಟ್ರ ಧ್ವಜಕ್ಕಾದರೂ ಅವಮಾನ ಮಡುತ್ತೀವಿ, ಕಾನೂನನ್ನೂ ಉಲ್ಲಂಘಿಸುತ್ತೀವಿ. ಯಾರೂ ಪ್ರಶ್ನಿಸಬಾರದು’ ಎನ್ನುವ ಬಿಜೆಪಿ ಧೋರಣೆ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೀವಿ ಎಂದರು.
ವಿರೋಧ ಪಕ್ಷಕ್ಕೆ ನೈತಿಕತೆ ಇಲ್ಲ ಎನ್ನುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮಾತಿಗೆ ಪ್ರತಿಕ್ರಿಯಿಸಿ, ನಮಗೆ ಬೊಮ್ಮಾಯಿ ಅವರಿಗಿಂತ ಹೆಚ್ಚು ಹೋರಾಟದ ಅನುಭವವಿದೆ. ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನ ನಮಗೆ ಗೊತ್ತಿದೆ. ಅವರಿಗೇನು ಗೊತ್ತಿದೆ ಇದೆಲ್ಲಾ ಎಂದು ತಿರುಗೇಟು ನೀಡಿದರು.
ಹೈಕಮಾಂಡ್ ಬುಲಾವ್
ಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚರ್ಚಿಸುವ ಉದ್ದೇಶದಿಂದ ಮುಂಬರುವ 25 ಕ್ಕೆ ಹೈಕಮಾಂಡ್ ನನ್ನನ್ನು ಕರೆದಿದೆ. ಅದಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿಯವರ ಸಾರಥ್ಯದಲ್ಲಿ ಸಭೆ ನಡೆಯಲಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
