ಜನರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಬಿಎಸ್ಪಿ ಪ್ರತಿಭಟನೆ

ಚಿಕ್ಕಮಗಳೂರು: ರೈತಾಪಿ ವರ್ಗ ಹಾಗೂ ದುಡಿಯುವ ವರ್ಗದ ಜನ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆಜಾದ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಜಿಲ್ಲಾ ಆಟದ ಮೈದಾನದಲ್ಲಿ ಧರಣಿ ನಡೆಸಿದರು. ಅಕ್ರಮ ಸಕ್ರಮ ಭೂ ಮಂಜೂರಾತಿ ಸಹಿತ ಹತ್ತಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಜಾಕಿರ್ ಹುಸೇನ್ ಆರೋಪಿಸಿದರು.
ಗೋಮಾಳ ಸೇರಿದಂತೆ ವಿವಿಧ ಸರ್ಕಾರಿ ಜಮೀನನ್ನು ಮಾರಾಟ ಮಾಡಲು ಉಪಸಮಿತಿ ರಚಿಸಿರುವುದನ್ನು ಟೀಕಿಸಿ, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಸಾವಿರಾರು ಜನ ಭೂಮಿಯಿಂದ ವಂಚಿತರಾಗಿದ್ದಾರೆ. ಸರ್ಕಾರಿ ಭೂಮಿಯನ್ನು ಶ್ರೀಮಂತರಿಗೆ ಮಾರಾಟ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.
ನಮೂನೆ 50, 53, 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಬಡವರಿಗೆ ನ್ಯಾಯ ಸಿಗುತ್ತಿಲ್ಲ. ಸಭೆಗಳು ಸರಿಯಾಗಿ ನಡೆಯದ ಮತದಾರರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಸಮಿತಿ ವೇಲಾಯುಧನ್, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಿಲ್ಲಾ ಘಟಕದ ಅಧ್ಯಕ್ಷೆ ಸುಧಾ ಮಾತನಾಡಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದೂರು-ಪ್ರತಿದೂರು ದಾಖಲು ಮಾಡುವ ಮೂಲಕ ತೇಪೆ ಹಾಕುವ ಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.



