ಕೇಸರಿ ಧ್ವಜ ವಿಚಾರ, ಧರಣಿ ಮುಂದುವರಿಸಿದ ಕಾಂಗ್ರೆಸ್, ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ

ಬೆಂಗಳೂರು: ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಬುಧವಾರ ವಿಧಾನಮಂಡಲ ಉಭಯ ಸದನಗಳಲ್ಲಿ ಸ್ಪೀಕರ್ ಪೀಠದ ಎದುರಿನ ಬಾವಿಗಿಳಿದು ಆರಂಭಿಸಿರುವ ಧರಣಿಯನ್ನು ಗುರುವಾರವೂ ಮುಂದುವರಿದಿದೆ.
ಗುರುವಾರ ಸ್ಪೀಕರ್ ಕಚೇರಿಯಲ್ಲಿ ಈ ಸಂಬಂಧ ನಡೆದ ಸಂಧಾನ ಸಭೆ ವಿಫಲವಾಗಿದೆ. ಸದನದಲ್ಲಿ ಧರಣಿ ಮುಂದುವರಿಸಲು ತೀರ್ಮಾನಿಸಿತು. ಪ್ರಶ್ನೋತ್ತರ ವೇಳೆ, ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು ರಾಷ್ಟ್ರವಿರೋಧಿ ಬಿಜೆಪಿಗೆ ದಿಕ್ಕಾರ, ಸಚಿವ ಈಶ್ವರಪ್ಪ ದೇಶದ್ರೋಹಿ ಘೋಷಣೆ ಕೂಗತೊಡಗಿದ್ದಾರೆ.
ಇದರ ನಡುವೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೋತ್ತರ ಕಲಾಪವನ್ನು ನಡೆಸಿದರು. ನಂತರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸ್ಪೀಕರ್ ಕರೆದರು.
ಇತ್ತ ಸ್ಪೀಕರ್ ಪೀಠದ ಬಾವಿಯಲ್ಲಿ ಧರಣಿ ಮುಂದುವರಿಸಿದ್ದ ಕಾಂಗ್ರೆಸ್ ಸದಸ್ಯರು ಸ್ಪೀಕರ್ ವಿಶ್ವೇಶ ಕಾಗೇರಿ ವಿರುದ್ಧ “ಕೈಗೊಂಬೆ, ಕೈಗೊಂಬೆ ಆರ್ ಎಸ್ ಎಸ್ ಕೈಗೊಂಬೆ ಎಂದು ಚಪ್ಪಾಳೆ ತಟ್ಟಿ ಘೋಷಣೆ ಕೂಗತೊಡಗಿದರು”. ಗದ್ದಲದ ನಡುವೆ ಸ್ಪೀಕರ್ ಕಾಗೇರಿ ಅವರು ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
