ಕನ್ನಡದ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅಸ್ತಂಗತ

ಖ್ಯಾತ ಕವಿ ನಾಡೋಜ ಚೆನ್ನವೀರ ಕಣವಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಣವಿ ಅವರಿಗೆ 93 ವರ್ಷ ವಯಸ್ಸಾಗಿದ್ದು ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಣವಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್ಡಿಎಂ ಆಸ್ಪತ್ರೆ ಈ ಹಿಂದೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿತ್ತು.
ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ನಿಂದ ಚೆನ್ನವೀರ ಕಣವಿ ಬಳಲುತ್ತಿದ್ದರು. ಸುಮಾರು ಒಂದು ತಿಂಗಳಿನಿಂದ ಎಸ್ಡಿಎಂ ಆಸ್ಪತ್ರೆಯಲ್ಲಿ ಕಣವಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮೊದಲು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಕಣವಿ ಬಳಿಕ ಸುಧಾರಿಸಿಕೊಂಡಿದ್ದರು. ಆದರೆ ಮತ್ತೆ ಆರೋಗ್ಯ ಹದಗೆಟ್ಟಿತ್ತು.
ಕಣವಿ ನಿಧನಕ್ಕೆ ಸಿಎಂ ಸಂತಾಪ
ಕಣವಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಸಜ್ಜನಿಕೆಯ ಸಾಕಾರಮೂರ್ತಿ ಚೆನ್ನವೀರ ಕಣವಿಯವರು ಮೃದು ಮಾತುಗಳಿಂದಲೇ ಮನಸ್ಸನ್ನು ಗೆಲ್ಲುತ್ತಿದ್ದರು. ಕಣವಿ ಅವರು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ರು. ಅವರು ಹಾಗೂ ಅವರ ಕುಟುಂಬ ನಮಗೆ ನಾಲ್ಕು ದಶಕಗಳಿಂದ ಆಪ್ತ. ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಶಸ್ತಿಗಳಿಗೇ ಅವರಿಂದ ಶೋಭೆ ಸಿಕ್ಕಿತ್ತು. ಪ್ರಶಸ್ತಿಗೆ ಗೌರವ ತರುವಂತಿತ್ತು ಅವರ ವ್ಯಕ್ತತ್ವ. ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಕನ್ನಡ ಸಾಹಿತ್ಯ ಒಬ್ಬೊಬ್ಬರನ್ನೇ ಕಳೆದುಕೊಳ್ತಿದೆ. ಕಳೆದುಕೊಂಡವರ ಪ್ರೇರಣೆ ಕನ್ನಡ ಸಾಹಿತ್ಯದವರು ಪಡೆಯಲಿ. ಆ ಮೂಲಕ ಮತ್ತಷ್ಟು ಮೇರು ಸಾಹಿತಿಗಳು ಬರಲಿ. ನಾಡೋಜ ಚನ್ನವೀರ ಕಣವಿ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.



