ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ನಿಧನ; ಗಣ್ಯರ ಸಂತಾಪ

ಮಂಡ್ಯ : ಹಿರಿಯ ಸಹಕಾರಿ ಧುರೀಣ, ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. 94 ವರ್ಷದ ಹಿರಿಯರಾಗಿದ್ದ ಮಾಜಿ ಶಾಸಕರು ವಯೋ ಸಹಜ ಆರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಅಗಲಿಕೆಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪಿಇಎಸ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾಗಿ, ಹಿರಿಯ ಸಹಕಾರಿ ಧುರೀಣರಾಗಿ, ಕಾವೇರಿ ಹೋರಾಟದ ಮುಂಚೂಣಿ ನಾಯಕರಾಗಿದ್ದರು. 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ, 2 ಬಾರಿ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಿತ್ಯ ಸಚಿವ ಕೆ.ವಿ.ಶಂಕರಗೌಡರ ಬಳಿಕ ಮಂಡ್ಯದ ಪ್ರತಿಷ್ಟಿತ ಪಿಇಟಿ ಸಂಸ್ಥೆಯ ಅಧ್ಯಕ್ಷರಾಗಿ 31 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದರು.
ಸಿದ್ದರಾಮಯ್ಯ ಸಂತಾಪ
ನನ್ನ ಆತ್ಮೀಯರೂ, ಹಿತೈಶಿಗಳೂ ಆಗಿದ್ದ ಮಂಡ್ಯದ ಹಿರಿಯ ಮುತ್ಸದ್ದಿ ಎಚ್.ಡಿ.ಚೌಡಯ್ಯ ಅವರ ನಿಧನ ಅತೀವ ದುಃಖದ ಸಂಗತಿ. ಪತ್ನಿಯವರ ಅಗಲಿಕೆ ಬಳಿಕ ಬಹಳ ನೊಂದಿದ್ದರು. ಈ ನೋವು ಇವರ ಆರೋಗ್ಯವನ್ನು ಹದಗೆಡಿಸಿತ್ತು. ಶತಾಯುಶಿ ಆಗುತ್ತಾರೆನ್ನುವ ನನ್ನ ನಿರೀಕ್ಷೆಯನ್ನು ನಿರಾಸೆಗೊಳಿಸಿ ನಮ್ಮನ್ನು ಅಗಲಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಸಂತಾಪ
ಮಾಜಿ ಶಾಸಕರು, ಶಿಕ್ಷಣ ತಜ್ಞರು, ಶಿಸ್ತು, ದಕ್ಷ ಆಡಳಿಗಾರರೂ ಆಗಿದ್ದ ಹೆಚ್.ಡಿ.ಚೌಡಯ್ಯ ಅವರ ನಿಧನ ನನಗೆ ಬಹಳ ನೋವನ್ನುಂಟು ಮಾಡಿದೆ. ನಾಲ್ಕು ಅವಧಿಗೆ ಶಾಸಕರು, ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ಅವರು ಆದರ್ಶ ಜನಪ್ರತಿನಿಧಿ ಆಗಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಎಣೆ ಇಲ್ಲದಷ್ಟು ಸೇವೆ ಸಲ್ಲಿಸಿದ್ದರು ಎಂದು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
