
ಮುಂಬೈ: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಿನ್ನೆಲೆ ಗಾಯಕ ಬಪ್ಪಿ ಲಹಿರಿ ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಸ್ಯಾಂಡಲ್ವುಡ್ನಲ್ಲೂ ಕಾರ್ಯನಿರ್ವಹಿಸಿದ್ದ ಬಪ್ಪಿ ಲಹಿರಿ ತಮ್ಮ ಹಾಡುಗಳಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಹಿಂದಿಯಲ್ಲಿ ಡಿಸ್ಕೋ ಡಾನ್ಸರ್, ರಾತ್ ಬಾಕಿ, ಬಂಬಾಯ್ ಸೇ ಆಯಾ ಮೇರಾ ದೋಸ್ತ್ ಸೇರಿದಂತೆ ಹಲವಾರು ಹಿಟ್ಗಳನ್ನು ಅವರು ನೀಡಿದ್ದರು.ಅನಾರೋಗ್ಯದಿಂದ ಬಳಲುತ್ತಿದ್ದ ಬಪ್ಪಿ ಲಹಿರಿ ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಲಹಿರಿ ಅವರು ಒಂದು ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಸೋಮವಾರ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಅವರು ಮಧ್ಯರಾತ್ರಿಗೆ ಸ್ವಲ್ಪ ಮೊದಲು ನಿಧನರಾದರು ಎಂದು ವೈದ್ಯರು ತಿಳಿಸಿದ್ದಾರೆ.
ಅಂದಹಾಗೆ ಬಪ್ಪಿ ಲಹಿರಿ ಅವರು ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದರು. 1986ರಲ್ಲಿ ತೆರೆಕಂಡ ‘ಕೃಷ್ಣಾ ನೀ ಬೇಗನೇ ಬಾರೋ’, ‘ಆಫ್ರಿಕಾದಲ್ಲಿ ಶೀಲ’ , ಗುರು ಮೊದಲಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ಲವ್ ಇನ್ ಮಂಡ್ಯ ಚಿತ್ರದ ಗೀತೆಗೂ ಅವರು ಹಾಡಿದ್ದರು.



