Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅವಗಣನೆ: ಸಿಎಲ್ ಪಿಯಲ್ಲಿ ಆಕ್ರೋಶ

ಬೆಂಗಳೂರು: ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವ ವಿಷಯದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸಿರುವ ಸರ್ಕಾರದ ಧೋರಣೆ ವಿರುದ್ಧ ತೀವ್ರ ಹೋರಾಟ ನಡೆಸಲು ಶಾಸಕಾಂಗ ಸಭೆ ತೀರ್ಮಾನಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅನುದಾನ ಬಿಡುಗಡೆ ವಿಚಾರ ಕುರಿತು ಸುದೀರ್ಘ ಸಮಾಲೋಚನೆ ನಡೆದಿದೆ.

ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್ ಸೇರಿದಂತೆ ಸರ್ಕಾರದ ವಿವಿಧ ಹಗರಣಗಳ ಬಗ್ಗೆಯೂ ಸದನದಲ್ಲಿ ಚಾಟಿ ಬೀಸಲು ಸಭೆ ನಿರ್ಧರಿಸಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನಯಾ ಪೈಸೆ ಇಲ್ಲ ಎಂದು ಶಾಸಕರು ದೂರಿದರು.

ಆರ್ಥಿಕವಾಗಿ ರಾಜ್ಯ ದಿವಾಳಿ

ಸಭೆಯ ಆರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ,  ರಾಜ್ಯಪಾಲರ ಭಾಷಣದಲ್ಲಿ ಸುಳ್ಳುಗಳೇ ತುಂಬಿವೆ. ನಮ್ಮ ಸರ್ಕಾರ ಇದ್ದಾಗ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನೂ ಅದರಲ್ಲಿ ಸೇರಿಸಲಾಗಿದೆ ಎಂದರು. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ. ಕೇಳಿದರೆ ಕೋವಿಡ್ ನೆಪ ಹೇಳಲಾಗುತ್ತಿದೆ. ಅರ್ಥಿಕವಾಗಿ ರಾಜ್ಯ ದಿವಾಳಿ ಆಗಿದೆ. ಹಣಕಾಸು ಪರಿಸ್ಥಿತಿ ಕೆಟ್ಟದಾಗಿದೆ ಎಂದರು.

ರಾಜ್ಯದಿಂದ ಪ್ರತಿ ವರ್ಷ ಮೂರು ಲಕ್ಷ ಕೋಟಿ ತೆರಿಗೆ ಸಂಗ್ರವಾಗುತ್ತದೆ. ಆದರೆ ಕೇಂದ್ರ ಸರ್ಕಾರ ನಮಗೆ ನೀಡುವ ಪರಿಹಾರ 50-60 ಸಾವಿರ ಕೋಟಿ ಮಾತ್ರ. ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಮನೆಯನ್ನು ಸರ್ಕಾರ ಹೊಸದಾಗಿ ಕೊಟ್ಟಿಲ್ಲ. ಪತ್ರಿಕೆಗಳಿಗೆ ನಿತ್ಯ ಜಾಹಿರಾತು‌ ನೀಡುತ್ತಿರುವ ಸರ್ಕಾರ ಅದರಲ್ಲಿಯೂ ಸುಳ್ಳುಗಳನ್ನು ಹೇಳಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಕಡೆಗಣನೆ

ನೀರಾವರಿಗೆ ಒಂದು ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದ ಸರ್ಕಾರ ಅದರಲ್ಲಿಯೂ ವಿಫಲವಾಗಿದೆ. ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವುದನ್ನು ಹೊರತುಪಡಿಸಿದರೆ ಹೈದರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗೂ ಹಣ ಕೊಟ್ಟಿಲ್ಲ. ಗುತ್ತಿದಾರರ ಸಂಘ ಸರ್ಕಾರದ ವಿರುದ್ಧ ಮಾಡಿರುವ ಶೇ.40 ಪರ್ಸೆಂಟ್ ಕಮಿಷನ್ ಆರೋಪ, ರಾಷ್ಟ್ರೀಯ ಶಿಕ್ಷಣ ನೀತಿ‌ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗ ರೆಡ್ಡಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಖಾದರ್, ಹಿರಿಯ ಮುಖಂಡ ದೇಶಪಾಂಡೆ, ಎಚ್.ಕೆ. ಪಾಟೀಲ್, ಎಐಸಿಸಿಯ ಚುನಾವಣಾ ವೀಕ್ಷಕ ಸುದರ್ಶನ ನಾಚಿಯಪ್ಪನ್, ಅಬ್ರಹಾಂ ಸಭೆಯಲ್ಲಿ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button