ಜಿಲ್ಲಾ ಸುದ್ದಿಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದಿಂದ ರೈತವಿರೋಧಿ ಧೋರಣೆ: ಆಕ್ರೋಶ

ದೇವನಹಳ್ಳಿ: ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ತೆಗೆದಿದ್ದರೂ ರಾಜ್ಯ ಸರ್ಕಾರ ಆ ನಿಯಮವನ್ನು ಬದಲಾಯಿಸದೆ, ರೈತ ವಿರೋಧಿ ಧೋರಣೆಯಿಂದ ಆಡಳಿತ ನಡೆಸುತ್ತ ರೈತರಿಗೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೊಳಿಸದೆ ವಂಚಿಸುತ್ತಿದೆ ಎಂದು ಆರೋಪಿಸಿ ದೇವನಹಳ್ಳಿಯ ಟೋಲ್ ಬಳಿ ರೈತಸಂಘಟನೆಯವರು ಜಮಾಯಿಸಿ ದಿಢೀರ್ ರಸ್ತೆತಡೆ ಚಳವಳಿ ನಡೆಸಿದರು.
ರಾಗಿ ಮತ್ತು ಜೋಳ ಖರೀದಿ ಕೇಂದ್ರ ತೆರೆಯದೆ ಸರ್ಕಾರ ರೈತರನ್ನು ವಂಚನೆ ಮಾಡಿದ್ದು, ಇದನ್ನು ಖಂಡಿಸಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮದ ಅಂಗವಾಗಿ ರಸ್ತೆ ತಡೆ ಚಳವಳಿ ನಡೆಸಿದ್ದೇವೆ ಎಂದು ಮುಖಂಡ ಶಂಕರಪ್ಪ ತಿಳಿಸಿದರು
ಕೆಲಕಾಲ ರಸ್ತೆ ತಡೆ ನಡೆಸಿದಾಗ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿಕೊಂಡಾಗ, ರಸ್ತೆ ತಡೆಯನ್ನು ಮೊಟಕುಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಪಿ.ಎನ್.ಶಂಕರಪ್ಪ, ನರಸಿಂಹಪ್ಪ, ಮಧುಸೂದನ್ ರೆಡ್ಡಿ ಮತ್ತಿತರರು ಇದ್ದರು.




