ಹಿಜಾಬ್-ಕೇಸರಿ ಶಾಲು ಕರಿನೆರಳಿನ ನಡುವೆ ಇಂದಿನಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು: ಪ್ರಸಕ್ತ ಸಾಲಿನ ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಒಟ್ಟು ಹತ್ತು ದಿನಗಳ ಈ ಅಧಿವೇಶನ ನಡೆಯಲಿದೆ. ಮುಖ್ಯವಾಗಿ ರಾಜ್ಯಾದ್ಯಂತ ಭುಗಿಲೆದ್ದ ಹಿಜಾಬ್-ಕೇಸರಿ ಶಾಲು ವಿವಾದ, ಕಾನೂನು ಸುವ್ಯವಸ್ಥೆ, ಹಿಂದುಳಿದವರಿಗೆ ರಾಜಕೀಯ ಮೀಸಲಾತಿ, ಕೋವಿಡ್ ಮತ್ತು ಮೇಕೆದಾಟು ವಿಚಾರ, ಸರ್ಕಾರಿ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಸೇರಿದಂತೆ ವಿವಿಧ ವಿಷಯಗಳ ಸಂಬಂಧ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಸೋಮವಾರ ಬೆಳಗ್ಗೆ 11ಕ್ಕೆ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಂಗಳವಾರದಿಂದದ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ಆರಂಭವಾಗಲಿದೆ. ಪ್ರಶ್ನೋತ್ತರ ಸೇರಿದಂತೆ ವಿವಿಧ ಕಲಾಪಗಳು ಎಂದಿನಂತೆ ನಡೆಯಲಿವೆ.
ಉಡುಪಿ ಸರ್ಕಾರಿ ಕಾಲೇಜಿನಿಂದ ಆರಂಭವಾಗಿ ರಾಜ್ಯವ್ಯಾಪಿಯಾಗಿ ಹರಡಿದ ಹಿಜಾಬ್-ಕೇಸರಿ ಶಾಲು ವಿವಾದ ಸಂಬಂಧ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ಪ್ರಕರಣ ಕುರಿತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಈಗಾಗಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣವನ್ನು ಸರ್ಕಾರಿ ಸರಿಯಾಗಿ ನಿಭಾಯಿಸಲಿಲ್ಲ ಎಂದು ಮಾಜಿ ಸಿಎಂ ಜೆಡಿಎಸ್ ನಾಯಕ, ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಪ್ರತ್ಯುತ್ತರಕ್ಕೆ ಸರ್ಕಾರ ಸಜ್ಜು
ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮತ್ತಿತರ ವಿಷಯಗಳೂ ಅಧಿವೇಶನದಲ್ಲಿ ಪ್ರತಿಧ್ವನಿಸುವ ನಿರೀಕ್ಷೆ ಇದೆ. ವಿರೋಧ ಪಕ್ಷಗಳಿಗೆ ಪ್ರತ್ಯುತ್ತರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ, ಸಚಿವರು ಸಜ್ಜಾಗಿದ್ದಾರೆ. ವಿಪಕ್ಷಗಳಿಗೆ ಅಂಕಿ-ಅಂಶಗಳ ಸಮೇತ ಜವಾಬು ನೀಡಲು ಸಿಎಂ ತಯಾರಿ ನಡೆಸಿದ್ದಾರೆ.
ಮತಾಂತರ ನಿಷೇಧ ಮಸೂದೆ
ಕಳೆದ ಅಧಿವೇಶನದಲ್ಲಿ ವಿಧಾನಪರಿಷತ್ ನಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಮೇಲ್ಮನೆಯಲ್ಲೂ ಮಸೂದೆಗೆ ಒಪ್ಪಿಗೆ ಪಡೆಯಲು ಸರ್ಕಾರ ಮುಂದಾಗಲಿದೆ. ಇದಲ್ಲದೆ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕ ಪರೀಕ್ಷೆಯ ಆಯ್ಕೆಪಟ್ಟಿಯನ್ನು ಊರ್ಜಿತಗೊಳಿಸುವ ಮಸೂದೆ, ಅಪರಾಧ ದಂಡ ಪ್ರಕ್ರಿಯೆ ಸಂಹಿತೆ ತಿದ್ದುಪಡಿ ವಿಧೇಯಕ ಸೇರಿದಂತೆ ವಿವಿಧ ವಿಧೇಯಕಗಳು ಅಧಿವೇಶನದಲ್ಲಿ ಮಂಡನೆಯಾಗಲಿವೆ.
ಪ್ರತಿಪಕ್ಷದಲ್ಲಿ ಹಲವರ ನೇಮಕ
ಈ ನಡುವೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕರಾಗಿ ಮಾಜಿ ಸಚಿವ ಯು.ಟಿ.ಖಾದರ್ ನೇಮಕವಾಗಿದ್ದಾರೆ. ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ ಬಿ.ಕೆ.ಹರಿಪ್ರಸಾದ್ ಆಯ್ಕೆಯಾಗಿದ್ದಾರೆ. ಸಿ.ಎಂ.ಇಬ್ರಾಹಿಂ ಅವರಿಗೆ ಈ ಅವಕಾಶ ತಪ್ಪಿದೆ. ಸಭಾನಾಯಕರಾಗಿ ಸಚಿವ ಶ್ರೀನಿವಾಸ ಪೂಜಾರಿ ಮುಂದುವರಿದರೆ, ಉಪ ಸಭಾಪತಿ ಆಯ್ಕೆಯಾಗಬೇಕಿದೆ. ಈ ಸ್ಥಾನಕ್ಕಾಗಿ ಆಯನೂರು ಮಂಜುನಾಥ್, ಅರುಣ್ ಶಹಪುರ, ವೈ.ಎ.ನಾರಾಯಣ ಸ್ವಾಮಿ ಸೇರಿದಂತೆ ಮೇಲ್ಮನೆಯ ಹಲವು ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ತೆರೆಯ ಮರೆಯಲ್ಲಿ ಲಾಬಿ ನಡೆಸಿದ್ದಾರೆ.
