ಹಿಜಾಬ್ ಪ್ರಕರಣ, ರಾಷ್ಟ್ರೀಯ ವಿಷಯವನ್ನಾಗಿಸಬೇಡಿ: ಸುಪ್ರೀಂಕೋರ್ಟ್ ತಾಕೀತು

ನವದೆಹಲಿ: ಹಿಜಾಬ್ ಪ್ರಕರಣವನ್ನು ರಾಷ್ಟ್ರೀಯ ವಿಷಯವನ್ನಾಗಿಸದಂತೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಒತ್ತಾಯಿಸಬಾರದು ಎಂದ ಕರ್ನಾಟಕ ಹೈಕೋರ್ಟ್ ಮೌಖಿಕ ಸೂಚನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತು. ನ್ಯಾಯಾಲಯವು ಸೂಕ್ತ ಸಮಯದಲ್ಲಿ ಮಾತ್ರ ಮಧ್ಯ ಪ್ರವೇಶಿಸುತ್ತದೆ. ಈ ವಿಷಯಗಳನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಬೇಡಿ ಎಂದು ಅರ್ಜಿದಾರರಿಗೆ ಅವರು ಸಲಹೆ ನೀಡಿದರು.
ಅರ್ಜಿದಾರರ ವಕೀಲರು ತುರ್ತು ವಿಚಾರಣೆಗೆ ಒತ್ತಾಯಿಸಿದರು. ಪ್ರಕರಣ ದೂರದ ಪರಿಣಾಮಗಳನ್ನು ಹೊಂದಿದೆ ಮತ್ತು ವಿದ್ಯಾರ್ಥಿಗಳು ಹತ್ತು ವರ್ಷಗಳಿಂದ ಹಿಜಾಬ್ ಧರಿಸಿದ್ದರು. ಆದರೆ, ಸುಪ್ರೀಂಕೋರ್ಟ್, ಹೈಕೋರ್ಟ್ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.
ಇದನ್ನು ದೊಡ್ಡ ಮಟ್ಟಕ್ಕೆ ಹರಡಬೇಡಿ. ಏನಾಗುತ್ತಿದೆ ಎಂದು ನಮಗೆ ತಿಳಿದಿದೆ. ಯೋಚಿಸಿ, ಈ ವಿಷಯಗಳನ್ನು ದೆಹಲಿಗೆ ತರುವುದು ಸರಿಯೇ ? ರಾಷ್ಟ್ರಮಟ್ಟದಲ್ಲಿ ಏನಾದರೂ ತಪ್ಪಿದ್ದರೆ ನಾವು ನೋಡುತ್ತೇವೆ ಎಂದು ಮುಖ್ಯನ್ಯಾಯಾಮೂರ್ತಿ ಹೇಳಿದರು.
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸುತ್ತಿದೆ. ಗುರುವಾರ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠವು ಸೋಮವಾರ ವಿಚಾರಣೆಯನ್ನು ಪುನರಾರಂಭಿಸಲಿದೆ.
