ಗೋಕರ್ಣದ ಶ್ರೀ ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ನೌಕರನಿಗೆ ಅನ್ಯಾಯ; ಹಾಲಕ್ಕಿ ಸಮಾಜದಿಂದ ಶಾಸಕರಿಗೆ ದೂರು

ಕಾರವಾರ : ಗೋಕರ್ಣದ ಶ್ರೀ ಮಹಾಬಲೇಶ್ವರ ಅರ್ಬನ್ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಮಾ ತಿಮ್ಮ ಗೌಡರನ್ನು ಎರಡು ವರ್ಷಗಳ ಮೊದಲೇ ಸೇವಾ ನಿವೃತ್ತಿ ಮಾಡಿರುವುದನ್ನು ವಿರೋಧಿಸಿ ಹಾಲಕ್ಕಿ ಒಕ್ಕಲಿಗರ ಸಂಘವು ಶಾಸಕ ದಿನಕರ ಶೆಟ್ಟಿ ಅವರಿಗೆ ಬ್ಯಾಂಕ್ ವಿರುದ್ಧ ದೂರು ಸಲ್ಲಿಸಿದೆ.
ಕುಮಟಾ ತಾಲೂಕು ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡ ಅವರ ನೇತೃತ್ವದಲ್ಲಿ ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿ ಮಾಡಿದ ಸಂಘದ ಪ್ರಮುಖರು ಗೋಕರ್ಣ ಅರ್ಬನ್ ಬ್ಯಾಂಕ್‌ನಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಮಾ ತಿಮ್ಮ ಗೌಡರನ್ನು ಎರಡು ವರ್ಷಗಳ ಮೊದಲೇ ನಿವೃತ್ತಿಗೊಳಿಸುವ ಮೂಲಕ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಬ್ಯಾಂಕ್ ವಿರುದ್ಧ ದೂರಿದರು.
ಕಳೆದ 28 ವರ್ಷಗಳಿಂದ ಬ್ಯಾಂಕ್‌ನಲ್ಲಿ ಡಿ.ದರ್ಜೆಯ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ರಾಮಾ ತಿಮ್ಮ ಗೌಡ ಅವರು 1 – 10 – 1994 ರಂದು ಅಟೆಂಡರ್ ಹುದ್ದೆಗೆ ನೇಮಕಾತಿ ಪಡೆದುಕೊಂಡಿದ್ದರು.ಸಹಕಾರಿ ಇಲಾಖೆ ಮತ್ತು ಸರ್ಕಾರದ ನಿಯಮಗಳ ಪ್ರಕಾರ ರಾಮಾ ಗೌಡರಿಗೆ 2023 ರ ತನಕ ಬ್ಯಾಂಕ್‌ನಲ್ಲಿ ನೌಕರಿ ಮಾಡುವ ಅವಕಾಶವಿದೆ.ಆದರೆ ಬ್ಯಾಂಕ್ ವ್ಯವಸ್ಥಾಪಕರು 29 – 04 – 2021 ರಂದು ಗೌಡರಿಗೆ ನಿವೃತ್ತಿಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.ಇದರಿಂದ ಅಚ್ಚರಿಗೊಂಡ ಗೌಡರು ನನಗಿನ್ನೂ 58 ವರ್ಷ ವಯಸ್ಸು. 2 ವರ್ಷ ಸೇವಾವಧಿ
ಇನ್ನೂ ಬಾಕಿಯಿದೆ.ನನಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸಿಕೊಂಡರು.
ಆದರೂ 31 – 05 -2021 ರಂದು ನಿವೃತ್ತಿಗೊಳಿಸಿದ್ದಾರೆ.ನೌಕರರನ್ನು 58 ವರ್ಷಕ್ಕೆ ನಿವೃತ್ತಿಗೊಳಿಸುವ ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್‌ಗಳ 1960 ರ ನಿಯಮ 18 (2) ನ್ನು ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಎರಡು ವರ್ಷ ಹೆಚ್ಚಿಗೆ ಸೇವಾವಧಿ ಕಲ್ಪಿಸಿ ಬದಲಾಯಿಸಲಾಗಿದೆ.ಈ ನಿಯಮ ಎಲ್ಲ ಸಹಕಾರಿ ಸಂಘ,ಸಹಕಾರಿ ಬ್ಯಾಂಕ್ ಬೈಲಾದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲು
ಸರ್ಕಾರ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ.ಆದರೂ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ ಗೋಕರ್ಣ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿಯು ರಾಮಾ ಗೌಡರನ್ನು 58 ವರ್ಷಕ್ಕೆ ನಿವೃತ್ತಿಗೊಳಿಸಿರುವುದು ಖಂಡನೀಯ.ಈ ಪ್ರಕರಣದ ಬಗ್ಗೆ ದಾವೆ ವಿಚಾರಣೆ ನಡೆಸಿದ ಉಪ ನಿಬಂಧಕರು,ಬ್ಯಾಂಕ್ ಗೌಡರಿಗೆ ಕೊಟ್ಟಿರುವ ನಿವೃತ್ತಿ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದ್ದಾರೆ.ಇಷ್ಟಾದರೂ ಬ್ಯಾಂಕ್‌ನವರು ಮಾತ್ರ ಗೌಡರನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳದೆ ಸತಾಯಿಸುತ್ತಿದ್ದಾರೆ.
ರಾಮಾ ಗೌಡ ದಿನವೂ ಡಿಆರ್ ಕೋರ್ಟಿನ ತಡೆಯಾಜ್ಞೆ ಹಿಡಿದುಕೊಂಡು ಬ್ಯಾಂಕಿಗೆ ಉದ್ಯೋಗಕ್ಕೆಂದು ಹೋಗುತ್ತಿದ್ದಾರೆ.ಆದರೆ ಅವರಿಗೆ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಅವರು ಬೆಳಗ್ಗಿನಿಂದ ಸಂಜೆವರೆಗೆ ಬ್ಯಾಂಕಿನ ಮೂಲೆಯಲ್ಲಿ ಕುಳಿತು ಎದ್ದು ಬರುತ್ತಿದ್ದಾರೆ.ಈಗ ಅವರಿಗೆ ಬ್ಯಾಂಕಿನ ಅಧಿಕಾರಿಗಳು ಸಹ ಬೆದರಿಕೆ ಹಾಕುತ್ತಿದ್ದಾರೆಂದು ಶಾಸಕರಿಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ.
ಹಾಲಕ್ಕಿ ಒಕ್ಕಲಿಗರ ಸಂಘವು ಸಲ್ಲಿಸಿದ ದೂರನ್ನು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಅವರು ಸಹಕಾರಿ ಬ್ಯಾಂಕ್‌ನ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸಹಕಾರಿ ಕ್ಷೇತ್ರದಲ್ಲಿ ನಾನು ಹಸ್ತಕ್ಷೇಪ ಮಾಡುವವನಲ್ಲ.ಆದರೆ ಈ ಗೋಕರ್ಣ ಅರ್ಬನ್ ಬ್ಯಾಂಕ್‌ನಿಂದ ಓರ್ವ ಬಡ ನೌಕರನಿಗೆ ಅನ್ಯಾಯವಾಗಿರುವುದು ಕಂಡುಬಂದಿದೆ.ಈ ಬಗ್ಗೆ ಬ್ಯಾಂಕ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ,ರಾಮಾ ಗೌಡರಿಗಾದ ಅನ್ಯಾಯವನ್ನು ಸರಿಪಡಿಸುತ್ತೇನೆ ಎಂದರು.
ಶಾಸಕರಿಗೆ ದೂರು ಸಲ್ಲಿಸುವ ಸಂದರ್ಭದಲ್ಲಿ ಕುಮಟಾ ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಪುರಸಭೆ ಸದಸ್ಯೆ ಶೈಲಾ ಗೌಡ,ಸೂರ್ಯಕಾಂತ ಗೌಡ,ತುಳಸು ಗೌಡ,ಗೋಕರ್ಣ ಗ್ರಾ.ಪಂ.ಸದಸ್ಯ ಸತೀಶ ಭಂಡಾರಿ,ಮೋಹನದಾಸ,ಕುಮಾರ ಕವರಿ,ಹಾಲಕ್ಕಿ ಸಮಾಜದ ಪ್ರಮುಖರಾದ ಸುಬ್ರಾಯ ಗೌಡ ಹೊನ್ನಾವರ, ಮಾಣೇಶ್ವರ ಗೌಡ,ನಾಗೇಶ ಗೌಡ,ನಾಗರಾಜ ಗೌಡ ಇತರರು ಇದ್ದರು.




