ನಾನು ಕೂಲ್ ಆಗಿದ್ದೇನೆ, ವಿಚಲಿತನಾಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಸಮಾಜವನ್ನು ವಿಚಲಿತಗೊಳಿಸುವ ಪ್ರಕರಣಗಳು ನಡೆದಾಗ ತಲೆಕೆಡಿಸಿಕೊಳ್ಳುತ್ತೇನೆ. ಉಳಿದಂತೆ ನಾನು ತಾಳ್ಮೆ ಮತ್ತು ಖುಷಿ ಹಾಗೂ ಕೂಲ್ ಆಗಿರುತ್ತೇನೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ನಾನು ಖುಷಿಯಾಗಿಲ್ಲ. ವಿಚಲಿತನಾಗಿದ್ದೇನೆ ಎಂದು ಸಿ.ಎಂ. ಇಬ್ರಾಹಿಂ ಹೇಳಿರುವುದು ಸರಿಯಲ್ಲ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಅವರಿಗೂ ನಾಗೆ ಕಂಡಿರಬಹುದು ಎಂದು ತಿರುಗೇಟು ನೀಡಿದರು.
ಇಬ್ರಾಹಿಂ ಜತೆ ಮಹಾದೇವಪ್ಪ ಚರ್ಚೆ
ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಅವರು ಇಬ್ರಾಹಿಂ ಅವರ ಜತೆ ಮಾತುಕತೆ ನಡೆಸಿ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದ ಸಿದ್ದರಾಮಯ್ಯ, ಮೇಲ್ಮನೆ ಪ್ರತಿಪಕ್ಷದ ಸ್ಥಾನ ಸಿಗಲಿಲ್ಲ ಎಂದು ಅವರು ಕೋಪಗೊಂಡಿದ್ದಾರೆ. ಅವರ ಸಿಟ್ಟು ಇಳಿದ ಮೇಲೆ ಅವರ ಜತೆ ನಾನು ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ಬಿಡುವುದಿಲ್ಲ
ಇಬ್ರಾಹಿಂ ಜತೆ ನನಗೆ ಗೆಳೆತನವಿದೆ. ಅವರನ್ನು ನಾನು ನೋಡಿದ್ದೇನೆ. ನನ್ನ ಪ್ರಕಾರ ಅವರು ಕಾಂಗ್ರೆಸ್ ಪಕ್ಷ ತ್ಯಜಿಸುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಮಾಜಿ ಸಿಎಂ ದಿವಂಗದ ವಿರೇಂದ್ರ ಪಾಟೀಲ್ ಅವರ ಜತೆ ಇಬ್ರಾಹಿಂ, ಕಾಂಗ್ರೆಸ್ ಪಕ್ಷ ಸೇರಿದ್ದರು. ಆಗ ಅವರೊಂದಿಗೆ ನಾನು ಇರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ಇರಲಿಲ್ಲ. ಆಗ ಅವರಿಗೆ ಏನು ಅನ್ಯಾಯವಾಯಿತು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕಾಲಕ್ರಮೇಣ ಇಬ್ರಾಹಿಂ ಅವರು ಜನತಾದಳಕ್ಕೆ ಬಂದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಾಗ, ನನ್ನೊಂದಿಗೆ ಅವರೂ ಮತ್ತೆ ಕಾಂಗ್ರೆಸ್ ಸೇರಿದರು ಎಂದು ವಿವರಿಸಿದರು.
