ಹಿಜಾಬ್ – ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ : ರಾಜ್ಯ ಸರ್ಕಾರ ಖಡಕ್ ಸೂಚನೆ

ಬೆಂಗಳೂರು : ಕರ್ನಾಟಕದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಸರಿ ಶಾಲು, ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಕುರಿತು ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಹಿಜಾಬ್-ಕೇಸರಿ ಶಾಲು ವಿವಾದ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ಪ್ರಸ್ತುತ ನ್ಯಾಯಾಲಯದಲ್ಲಿದೆ. ಅಡ್ವೊಕೇಟ್ ಜನರಲ್ ಅವರೊಂದಿಗೆ ಮುಖ್ಯಮಂತ್ರಿ ಚರ್ಚಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಬೇಕಿದೆ ಎಂದರು.
ಸರ್ಕಾರದ ನಿಲುವನ್ನು ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಅಡ್ವೊಕೇಟ್ ಜನರಲ್ಗೆ ಸೂಚಿಸಿದ್ದಾರೆ. ಹೈಕೋರ್ಟ್ ತೀರ್ಪು ಬರುವವರೆಗೆ ಸಮವಸ್ತ್ರ ಸಂಹಿತೆ ಪಾಲಿಸಬೇಕು ಎನ್ನುವುದನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸುತ್ತೇವೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
