ಕಲಬುರಗಿ ಮೇಯರ್ ಚುನಾವಣೆ ಕಾಂಗ್ರೆಸ್ ಅರ್ಜಿ ಎತ್ತಿಹಿಡಿದ ಹೈಕೋರ್ಟ್

ಕಲಬುರಗಿ: ಕಲಬುರಗಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಹೈಕೋರ್ಟ್ ಎತ್ತಿಹಿಡಿದಿದೆ. ಇದರಿಂದಾಗಿ ಬಿಜೆಪಿ ನಾಯಕರಿಗೆ ಹಿನ್ನೆಡೆಯಾದಂತಾಗಿದೆ. ಹಳೆ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ನ್ಯಾಯಾಲಯ ಸೂಚಿಸಿದೆ.
ಮೇಲ್ಮನೆಯ ಐವರು ಸದಸ್ಯರ ಹೆಸರನ್ನು ಮತದಾರರ ಪಟ್ಟಿಗೆ ಬಿಜೆಪಿ ಸೇರಿಸುವ ಪ್ರಯತ್ನ ಮಾಡಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇಂದ್ರೇಶ್ ನೇತೃತ್ವದ ಪೀಠ ಕಳೆದ ನವೆಂಬರ್ ನಲ್ಲಿ ಹೊರಡಿಸಿದ್ದ ಹಳೇ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ.
ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಸದಸ್ಯರು ಆಯ್ಕೆಯಾಗಿದ್ದಾರೆ. ಜೆಡಿಎಸ್ ಸದಸ್ಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಇದರ ನಡುವೆ , ಆಡಳಿತರೂಢ ಬಿಜೆಪಿ ಕಲಬುರಗಿಯಲ್ಲಿ ಮತದಾರರಾಗಿರದ ಐವರು ಹೆಸರನ್ನು ಸೇರಿಸಿ ಹಿಂಬಾಗಿಲ ಮೂಲಕ ಪಾಲಿಕೆಯ ಅಧಿಕಾರದ ಗಾದಿಗೇರುವ ಪ್ರಯತ್ನ ನಡೆಸಿತ್ತು.
ಮೇಲ್ಮನವಿ ಸಲ್ಲಿಕೆ
ಹೈಕೋರ್ಟ್ ಪೀಠದ ತೀರ್ಪನ್ನು ಪ್ರಶ್ನಿಸಿ ಶನಿವಾರ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.
